ದೇಶದ ಪುರಾಣ, ಇತಿಹಾಸ ನೈಜ್ಯತೆಯಿಂದ ರಚನೆಗೊಂಡಿಲ್ಲ: ಎಂ.ಕೃಷ್ಣಮೂರ್ತಿ

ಮಂಡ್ಯ, ಅ.20: ಪುರಾಣ ಮತ್ತು ಇತಿಹಾಸ ನೈಜ್ಯತೆಯಿಂದ ರಚನೆಗೊಂಡಿಲ್ಲ ಎಂಬುದನ್ನು ಇತಿಹಾಸ ತಜ್ಞ ಡಾ.ಬಿ.ಅರ್.ಅಂಬೇಡ್ಕರ್ ಹೇಳಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಉದ್ಯಾನವನದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಬಲಿಪಾಡ್ಯಮಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಭಾರತೀಯರ ಮೂಲನಿವಾಸಿ ದೊರೆಗಳಾದ ನರಕಾಸುರ ಮತ್ತು ಬಲಿಚಕ್ರವರ್ತಿ ಅವರ ಸಂಸ್ಮರಣೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಚೀನ ಭಾರತದ ಇತಿಹಾಸ ಮತ್ತು ಪುರಾಣ ಕಥೆಗಳು ಇತಿಹಾವೇ ಅಲ್ಲ. ಅದು ಮಹಿಳೆಯರು ಮತ್ತು ಮಕ್ಕಳ ಮನಸ್ಸನ್ನು ರಂಜಿಸಲು ರಚನೆಗೊಂಡಂತಹವು ಎಂಬುದನ್ನು ಅಂಬೇಡ್ಕರ್ ತಮ್ಮ ಕೃತಿ ಮತ್ತು ಭಾಷಣಗಳಲ್ಲಿ ಹೇಳಿದ್ದಾರೆ ಎಂದರು.
ದೇಶವನ್ನಾಳಿದ ಮೂಲನಿವಾಸಿ ನರಕಾಸುರ ಮತ್ತು ಬಲಿ ಚಕ್ರವರ್ತಿ ದೊರೆಗಳನ್ನು ಆರ್ಯರು ಮೋಸ ಮತ್ತು ಕುತಂತ್ರಗಳಿಂದ ಕೊಂದು ರಾಜ್ಯಾಧಿಕಾರವನ್ನು ದಕ್ಕಿಸಿಕೊಳ್ಳುತ್ತಾರೆ. ವೈಧಿಕ ಲೇಖಕರು ತಮ್ಮ ಅನುಕೂಲಕ್ಕಾಗಿ ಕೃತಿಗಳನ್ನು ರಚಿಸಿ, ಜನರ ರಕ್ಷಣೆ ಮಾಡುತ್ತಿದ್ದ ರಕ್ಕಸರನ್ನು ರಾಕ್ಷಸರೆಂದು ಬಿಂಬಿಸಿದ್ದಾರೆ ಎಂದು ಪ್ರತಿಪಾದಿಸಿದರು.
ಜೀವ ನೀಡುವವರಾಗಿದ್ದ ಮತ್ತು ಸುರಪಾನ ವಿರೋಧಿಗಳಾದ ಅಸುರರನ್ನು ನಾನಾ ಷ್ಯಡ್ಯಂತ್ರಗಳಿಂದ ಸಂಹಾರ ಮಾಡಿ, ಜನರಲ್ಲಿ ಮೌಢ್ಯವನ್ನು ಬಿತ್ತಿ ಅಜ್ಞಾನದ ಕೂಪಕ್ಕೆ ತಳ್ಳಲಾಗಿದೆ ಎಂದ ಅವರು, ಸತ್ಯ ತಿಳಿಯಬೇಕಾದರೆ ಸತ್ಯಶೋಧಕ ಸಮಾಜ ಸ್ಥಾಪಕರಾದ ಜ್ಯೋತಿಭಾ ಫುಲೆ ಮತ್ತು ಅಂಬೇಡ್ಕರ್ ಅವರ ಬರಹಗಳನ್ನು ಓದಬೇಕಿದೆ ಎಂದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಸಾಮಾಜಿಕ ವ್ಯವಸ್ಥೆಯನ್ನು ಗಮನಿಸಬೇಕು. ಅಧ್ಯಯನದೊಂದಿಗೆ ಇಂತಹ ಹೂತುಹೋಗಿರುವ ವಿಚಾರಗಳನ್ನು ಸಮಾಜಕ್ಕೆ ತೆರದಿಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವಕ್ತಾರ ಅಶೋಕ ಮೌರ್ಯ, ವಜ್ರ ಮುನಿ, ಪದಾಧಿಕಾರಿಗಳಾದ ಗಂಗಾಧರ, ಪ್ರಕಾಶ್, ಯೋಗ, ಗಿರೀಶ್, ದಯಾನಂದ ಹಿರಿಯ ಮುಖಂಡರಾದ ದಿನೇಶ್, ಶಿವಕುಮಾರ್, ತಾಳಶಾಸನ ಮೋಹನ್, ಅಧಿಕಾರಿ ಚಂದ್ರಹಾಸ್ ಮತ್ತಿತರರಿದ್ದರು.







