ಲೀ ಚಾಂಗ್ ಗೆ ಸೋಲುಣಿಸಿದ ಪ್ರಣಯ್
ಸೈನಾ, ಶ್ರೀಕಾಂತ್ ಕ್ವಾರ್ಟರ್ ಫೈನಲ್ ಗೆ

ಒಡೆನ್ಸಾ, ಅ.20: ಭಾರತದ ಎಚ್.ಎಸ್.ಪ್ರಣಯ್ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಬೆಳ್ಳಿ ಜಯಿಸಿದ್ದ ಮಲೇಷ್ಯಾದ ಲೀ ಚಾಂಗ್ ವೀ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ.
ಇದೇ ವೇಳೆ ಭಾರತದ ಸೈನಾ ನೆಹ್ವಾಲ್ ಮತ್ತು ಕೆ.ಶ್ರೀಕಾಂತ್ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಇಂಡೋನೇಷ್ಯಾ ಸೂಪರ್ ಸಿರೀಸ್ ಪ್ರೀಮಿಯರ್‌ನಲ್ಲಿ ಚಾಂಗ್ ವೀಗೆ ಸೋಲುಣಿಸಿದ್ದ ಪ್ರಣಯ್ ಇದೀಗ ಅದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ನಂ.1 ಆಟಗಾರ ಲೀ ಚಾಂಗ್ ವೀ ಅವರ ವಿರುದ್ಧ 21-17, 11-21, 21-19 ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದರು.
ಯುಎಸ್ ಚಾಂಪಿಯನ್ ಪ್ರಣಯ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾದ ಅಗ್ರಶ್ರೇಯಾಂಕದ ಸನ್ ವ್ಯಾನ್ ಹೊ ಅವರನ್ನು ಎದುರಿಸಲಿದ್ದಾರೆ.
ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ವಿಶ್ವದ ನಂ.8 ಆಟಗಾರ ಕೆ.ಶ್ರೀಕಾಂತ್ ಕೊರಿಯಾದ ಜಿಯಾನ್ ಹೈಯಾಕ್ ಜಿನ್ ವಿರುದ್ಧ ಕಠಿಣ ಹೋರಾಟದ ಮೂಲಕ ಗೆಲುವು ದಾಖಲಿಸಿದರು.
ಗ್ಲಾಸ್ಗೋದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪಡೆದಿದ್ದ ಭಾರತದ ಮಹಿಳಾ ತಾರೆ ಸೈನಾ ನೆಹ್ವಾಲ್ ಅವರು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ನಿಚ್ಚಾನ್ ಜಿಂದಪಾಲ್ ವಿರುದ್ಧ 22-20, 21-13 ನೇರ ಸೆಟ್‌ಗಳಿಂದ ಗೆಲುವಿನ ನಗೆ ಬೀರಿದರು. ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಅವಕಾಶ ದೃಢಪಡಿಸಿದರು.
ಶ್ರೀಕಾಂತ್ ಅವರು ಹಾಲಿ ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸಲ್‌ಸೆನ್‌ರನ್ನು ಮತ್ತು ಸೈನಾ ನೆಹ್ವಾಲ್ ಅವರು ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.







