ಪೊಲೀಸ್ ಸಂಸ್ಮರಣ ಸ್ಮಾರಕ-ಕ್ರೀಡಾಂಗಣ ನಿರ್ಮಾಣ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.21: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹುತಾತ್ಮರಾದ ಪೊಲೀಸರ ನೆನಪು ಶಾಶ್ವತವಾಗಿ ಉಳಿಯಲು ಬೆಂಗಳೂರಿನಲ್ಲಿಯೇ ಪೊಲೀಸ್ ಸಂಸ್ಮರಣ ಸ್ಮಾರಕ ಮತ್ತು ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶನಿವಾರ ಇಲ್ಲಿನ ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ರಾಜ್ಯ ಗೃಹ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಪಾಲ್ಗೊಂಡು, ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಪೊಲೀಸರ ಸಂಸ್ಮರಣ ಸ್ಮಾರಕ ಶಾಶ್ವತವಾಗಿ ಬೆಂಗಳೂರಿನಲ್ಲಿ ನಿರ್ಮಿಸಲು ಸ್ಥಳ ಪತ್ತೆಯಾಗಿದ್ದು, ಮುಂದಿನ ಸಾಲಿನ ದಿನಾಚರಣೆಯೊಳಗೆ ಸಂಸ್ಮರಣ ಸ್ಮಾರಕ ನಿರ್ಮಾಣ ಮಾಡಲಾಗುವುದು. ಅದೇರೀತಿ, ಕೆಎಸ್‌ಆರ್‌ಪಿ ಮೂರನೆ ಪಡೆ ಆವರಣ ವ್ಯಾಪ್ತಿಯಲ್ಲಿ ಪೊಲೀಸರಿಗೆ ಕ್ರೀಡಾಂಗಣ ನಿರ್ಮಿಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸ್ ಸಿಬ್ಬಂದಿಯ ವೇತನ ತಾರತಮ್ಯ ನಿವಾರಣೆ ಕಡೆಗೆ ಸರಕಾರ ಗಮನ ಹರಿಸಿದ್ದು, ಮಧ್ಯಂತರ ಪರಿಹಾರವಾಗಿ ಅನೇಕ ಸವಲತ್ತು ಘೋಷಿಸಿದೆ. ಭಡ್ತಿಯಲ್ಲಿ ಆಗುತ್ತಿದ್ದ ವಿಳಂಬವನ್ನೂ ತಪ್ಪಿಸಿದೆ ಎಂದ ಅವರು ಪೊಲೀಸ್ ಸಿಬ್ಬಂದಿಗಾಗಿ ಆರೋಗ್ಯ ಸೇವೆ, ಕ್ಯಾಂಟೀನ್, ಅವರ ಮಕ್ಕಳಿಗೆ ಶಿಕ್ಷಣ, ಮನೆಗಳ ನಿರ್ಮಾಣ ಮತ್ತಿತರ ಕಾರ್ಯಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದು ನುಡಿದರು.
ಪೊಲೀಸರಿಗೆ ವಸತಿ: ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಸೂಕ್ತ ವಸತಿ ಸೌಲಭ್ಯ ದೊರೆಯುತ್ತಿಲ್ಲ ಎಂಬುವುದು ಬೆಳಕಿಗೆ ಬಂದಿದ್ದು, ಪ್ರಸ್ತುತ ಸಾಲಿನಿಂದಲೇ ಅವರಿಗೆ ಸೂಕ್ತ ವಸತಿ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ತಂತ್ರಜ್ಞಾನ ಬಳಸಿ: ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಸಂಘಟಿತವಾಗಿ ಸಂಚು ರೂಪಿಸುವುದಲ್ಲದೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಪ್ಪುಗಳಿಂದ ಜಾರಿಕೊಳ್ಳುತ್ತಿದ್ದಾರೆ. ಆದರೆ, ಪೊಲೀಸರು ಆರೋಪಿಗಳಿಗಿಂತ ಒಂದು ಹೆಜ್ಜೆ ಮುಂದಾಗಿ ತಂತ್ರಜ್ಞಾನ ಬಳಸಿಕೊಂಡು ತನಿಖೆ ಚುರುಕುಗೊಳಿಸಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಲಹೆಗಾರ ಕೆಂಪಯ್ಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಸಂದ್ರ ಕುಂಟಿಯಾ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್ ಚಂದ್ರ, ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ, ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪೊಮ್ಮಯ್ಯಿ, ಕಸಾಪ ಅಧ್ಯಕ್ಷ ಮನು ಬಳಿಗಾರ್, ಚಿತ್ರನಟ ಶಿವರಾಜ್ ಕುಮಾರ್, ಎಫ್‌ಕೆಸಿಸಿ ಅಧ್ಯಕ್ಷ ಕೆ.ರವಿ, ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ವೆಂಕಟ್ ರಾವ್ ಸೇರಿದಂತೆ ಪ್ರಮುಖ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಪುಪ್ಪನಮನ ಸಲ್ಲಿಸಿದರು.
ಹುತಾತ್ಮರಾದ ಕರ್ನಾಟಕದ ಪೊಲೀಸರು
*ಎಸ್.ರವಿಕುಮಾರ್, ಎಸ್ಪಿ, ಲೋಕಾಯುಕ್ತ, ಮೈಸೂರು.
*ಎಂ.ಬಿ.ಪಾಟೀಲ್, ಎಸ್ಪಿ, ಲೋಕಾಯುಕ್ತ, ವಿಜಯಪುರ.
*ಎಂ.ಮಹೇಶ್‌ಕುಮಾರ್, ಪಿಐ, ಮೈಸೂರು ಜಿಲ್ಲೆ.
*ರಾಮಚಂದ್ರ ಹುಚ್ಚಪ್ಪ, ಬಳ್ಳಾರಿ, ಪಿಎಸ್ಸೈ, ಬೆಳಗಾವಿ.
*ಟಿ.ಡಿ.ಜಯರಾಮು, ಎಸ್ಸೈ,ಬೆಂಗಳೂರು.
*ಪುಟ್ಟಮಾದಾ, ಎಎಚ್‌ಸಿ, 411, ಬೆಂಗಳೂರು.
*ಅರುಣ್‌ಕುಮಾರ್, ಸಿಪಿಸಿ, 10544, ಬೆಂಗಳೂರು.
*ಎಚ್.ಎಸ್.ರಮೇಶ್, ಸಿಪಿಸಿ, 4074, ಬೆಂಗಳೂರು.
*ಸುರೇಶ್ ಎಸ್.ಡೆಂಗಿ, ಸಿಪಿಸಿ, 12161, ಬೆಂಗಳೂರು
*ರಮೇಶ್ ಡೆಂಗಿ, ಸೋಲಿಸಿ 693, ವಿಜಯಪುರ.
*ಡಿ.ಎಸ್.ಕಿರಣ್‌ಕುಮಾರ್, ಎಪಿಸಿ, 156, ಮೈಸೂರು.
*ಎಸ್.ಲಕ್ಷ್ಮಣ್, ಎಪಿಸಿ, 140, ಮೈಸೂರು.







