ಕಾನೂನು-ಸುವ್ಯವಸ್ಥೆ ಹದಗೆಡಿಸಲು ಬಿಜೆಪಿ ಯತ್ನ: ರಾಮಲಿಂಗಾರೆಡ್ಡಿ
ಟಿಪ್ಪು ಸುಲ್ತಾನ್ ಜಯಂತಿ

ಬೆಂಗಳೂರು, ಅ. 21: ಟಿಪ್ಪು ಸುಲ್ತಾನ್ ಜಯಂತಿ ನೆಪದಲ್ಲಿ ಕಾನೂನು-ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದು, ರಾಜ್ಯ ಸರಕಾರ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಇಂದಿಲ್ಲಿ ಎಚ್ಚರಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರ ಆಚರಣೆ ಮಾಡುತ್ತಿದ್ದು, ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಪ್ರಕಟಿಸುತ್ತದೆ. ಬಿಜೆಪಿಯವರು ಹೆಸರು ಹಾಕಬೇಡಿ ಎಂದರೆ ಈ ಬಗ್ಗೆ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ದ್ವಂದ್ವ ನೀತಿ: ಮಾಜಿ ಸಿಎಂ ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿದರು. ಆದರೆ, ಇದೀಗ ಏಕೆ ವಿರೋಧ ಮಾಡುತ್ತಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಮೊದಲು ಬಿಎಸ್‌ವೈ ಅವರನ್ನು ಪ್ರಶ್ನಿಸಿ, ಗೊಂದಲ ನಿವಾರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಬಿಎಸ್‌ವೈ ಭಾವಚಿತ್ರ ಪ್ರದರ್ಶ: ಬಿಎಸ್‌ವೈ ಕೆಜೆಪಿಯಲ್ಲಿದ್ದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದ್ದು, ಅಲ್ಲದೆ, ಮೈಸೂರು ಹುಲಿ ಟಿಪ್ಪು ಮಾದರಿಯಲ್ಲೇ ಟಿಪ್ಪು ಪೇಟಾ ಧರಿಸಿ, ಖಡ್ಗ ಹಿಡಿದದ್ದು ಏಕೆ ಎಂದು ರಾಮಲಿಂಗಾರೆಡ್ಡಿ, ಯಡಿಯೂರಪ್ಪರ ಭಾವಚಿತ್ರ ಪ್ರದರ್ಶಿಸುವ ಮೂಲಕ ತಿರುಗೇಟು ನೀಡಿದರು.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಮಾಧ್ಯಮಗಳೊಂದಿಗೆ ತನಿಖೆ ವಿಚಾರಗಳನ್ನು ಹಂಚಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಹಿರಂಗಪಡಿಸಲಾಗುವುದು ಎಂದ ಅವರು, ಕಲ್ಲಿದ್ದಲು ಗುತ್ತಿಗೆ ಸಂಬಂಧ ಬಿಎಸ್‌ವೈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.







