ಮಟ್ಕಾ ದೊರೆ ಲಿಯೋ ಬಗ್ಗೆ ಮಾಹಿತಿ ನೀಡಿದರೆ ನಗದು ಬಹುಮಾನ
ಫೋನ್ ಇನ್ ಕಾರ್ಯಕ್ರಮದಲ್ಲಿ ಉಡುಪಿ ಎಸ್ಪಿ ಡಾ.ಸಂಜೀವ ಪಾಟೀಲ್ ಘೋಷಣೆ

ಉಡುಪಿ ಎಸ್ಪಿ ಡಾ.ಸಂಜೀವ ಪಾಟೀಲ್
ಉಡುಪಿ, ಅ.21: ಜಿಲ್ಲೆಯಲ್ಲಿ ನಡೆಯುತ್ತಿರುವ ಮಟ್ಕಾ ದಂಧೆ ಸಂಬಂಧ ಮುಂದಿನ ಕ್ರಮ ಜರಗಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಮಟ್ಕಾ ದಂಧೆಯ ಪ್ರಮುಖ ಆರೋಪಿ ಉಡುಪಿಯ ಲಿಯೋ ಕರ್ನೆಲಿಯೋ ತಲೆಮರೆಸಿಕೊಂಡಿದ್ದು, ಆತನ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ಘೋಷಿಸಿದ್ದಾರೆ.
ಉಡುಪಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂಧೆಗೆ ಸಂಬಂಧಿಸಿ ಈವರೆಗೆ ಒಟ್ಟು 139 ಪ್ರಕರಣಗಳನ್ನು ದಾಖಲಿಸಿ 142 ಮಂದಿ ಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಫೋನ್ ಇನ್ ಕಾರ್ಯಕ್ರಮದ ಪರಿಣಾಮ ಕಳೆದ ವಾರ 3 ಮಟ್ಕಾ ಪ್ರಕರಣ ದಲ್ಲಿ ಮೂವರನ್ನು ಮತ್ತು 2 ಗಾಂಜಾ ಸೇವನೆ ಪ್ರಕರಣದಲ್ಲಿ ಇಬ್ಬರನ್ನು ಹಾಗೂ ನಾಲ್ಕು ಜೂಜು ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. 99 ಕೋಟ್ಪಾ ಕಾಯಿದೆಯಡಿ ಪ್ರಕರಣ, 29 ಕುಡಿದು ವಾಹನ ಚಲಾನೆ, 138 ಕರ್ಕಶ ಹಾರ್ನ್ ಹಾಗೂ 905 ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಟೋಲ್ಗೇಟ್ ವಿರುದ್ಧ ಕ್ರಮ
ಪಡುಬಿದ್ರಿ ಟೋಲ್ಗೇಟ್ನಲ್ಲಿ ಕೇವಲ ಎರಡು ಗೇಟ್ಗಳನ್ನು ಮಾತ್ರ ತೆರೆದಿಡುವ ಬಗ್ಗೆ ಸಾರ್ವಜನಿಕರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಟೋಲ್ಗೇಟ್ಗಳ ಎಲ್ಲ ಗೇಟ್ಗಳನ್ನು ತೆರೆದಿಡುವಂತೆ ಈಗಾಗಲೇ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಹೀಗೆ ಗೇಟು ಮುಚ್ಚಿದ್ದರೆ 100ಗೆ ಕರೆ ಮಾಡಿ ತಿಳಿಸಿ ನಾವು ಕೂಡಲೇ ಕ್ರಮ ಜರಗಿಸುತ್ತೇವೆ ಎಂದರು.
ಈ ದೂರಿನ ಹಿನ್ನೆಲೆಯಲ್ಲಿ ಎಸ್ಪಿ ತಕ್ಷಣವೇ ವಯರ್ಲೆಸ್ ಮೂಲಕ ಪಡುಬಿದ್ರೆ ಹಾಗೂ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಟೋಲ್ಗೇಟ್ ಗಳ ಎಲ್ಲ ಗೇಟುಗಳನ್ನು ತೆರೆದಿಡುವಂತೆ ಸೂಚನೆ ನೀಡಿದರು.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಮದುವೆ ಸಮಾರಂಭಗಳಲ್ಲಿ ರಾತ್ರಿ 10ಗಂಟೆ ನಂತರವೂ ಡಿಜೆ ಉಪಯೋಗಿಸುತ್ತಿರುವ ಹಾಗೂ ಮಾದಕ ದ್ರವ್ಯ ಗಳನ್ನು ಸೇವಿಸುತ್ತಿರುವ ಬಗ್ಗೆ ಎರಡು ದೂರುಗಳು ಬಂದವು. ತಡರಾತ್ರಿಯವರೆಗೆ ಸೌಂಡ್ ಸಿಸ್ಟಮ್ ಬಳಸುವ ಹಾಗೂ ಅಪ್ರಾಪ್ತರು ಮದ್ಯ ಸೇವಿಸುವುದು ಕಂಡುಬಂದರೆ ತಕ್ಷಣ ತಿಳಿಸಿ, ಕೂಡಲೇ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಹೇಳಿದರು.
ಹಿರಿಯಡಕ ಪೊಲೀಸ್ ಠಾಣೆಯ ಜೀಪು ಚಾಲಕ ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ಕುರಿತ ಸಾರ್ವಜನಿಕ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡುವಂತೆ ಸಲಹೆ ನೀಡಿದರು. ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜಾಮೀನುದಾರರ ಬ್ಯಾಂಕ್ ಖಾತೆಯಲ್ಲಿರುವ ಹೈನುಗಾರಿಕೆಯ ಹಣವನ್ನು ತಡೆಹಿಡಿದಿರುವ ಬಗ್ಗೆ ಮಹಿಳೆಯೊಬ್ಬರು ದೂರಿದರು. ಇದು ತಪ್ಪು ಕ್ರಮ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಸೊಸೈಟಿ ಸೂಚಿಸಲಾಗುವುದು ಎಂದು ಎಸ್ಪಿ ಹೇಳಿದರು.
29 ದೂರಿನ ಕರೆಗಳು
ಉಡುಪಿ ಸಂಚಾರ ಉಡುಪಿ ಬಸ್ ನಿಲ್ದಾಣದಿಂದ ಮಂಗಳೂರು ಕಡೆಗೆ ಹೋಗುವ ಬಸ್ಗಳು ನಗರಸಭೆವರೆಗೆ ಐದು ಕಡೆ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಕೊಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದರು.
ಮಲ್ಪೆತೊಟ್ಟಂನಲ್ಲಿ ಹಳೆಯ ಪಾದಚಾರಿ ಮಾರ್ಗವನ್ನು ಕಲ್ಲುಕಂಬ ಹಾಕಿ ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಹಿಳೆಯೊಬ್ಬರು ದೂರಿದರು. ಮಣಿಪಾಲ ಚೆಕ್ಬೌನ್ಸ್ ಪ್ರಕರಣದ ಆರೋಪಿ ನ್ಯಾಯಲಯಕ್ಕೆ ಹಾಜರಾಗದಿರುವ ಬಗ್ಗೆ ದೂರಲಾಯಿತು.
ಕೋಟದಲ್ಲಿ ಕೋಳಿ ಅಂಕ, ಉಡುಪಿ ಸಂತೆಕಟ್ಟೆ ಬಳಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್, ಕೊಲ್ಲೂರು ವಂಡ್ಸೆ ಪೇಟೆಯಲ್ಲಿ ಮೀನನ್ನು ರಸ್ತೆಯಲ್ಲಿಯೇ ಇಟ್ಟು ಮಾರಾಟ, ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಬಳಿ ಪ್ರತಿನಿತ್ಯ ಎರಡು ಕಾರ್ ರಸ್ತೆಯಲ್ಲಿ ಪಾರ್ಕ್ ಮಾಡುವುದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾವಣೆ, ಕುಂದಾಪುರ ಗ್ರಾಮಾಂತರದಲ್ಲಿ ಅಕ್ರಮ ಮದ್ಯ ಮಾರಾಟ ಶಂಕರನಾರಾಯಣ ಸಿದ್ದಾಪುರದಲ್ಲಿ ಮಟ್ಕಾ, ಕಾರ್ಕಳ ಗ್ರಾಮಾಂತರದಲ್ಲಿ ಇಸ್ಪೀಟ್ ಜುಗಾರಿ ಮತ್ತು ಸಚ್ಚರಿಪೇಟೆ ಬಳಿ ಕ್ರಿಕೆಟ್ ಕಮೆಂಟ್ರಿಯಿಂದ ಸಾರ್ವಜನಿಕರಿಗೆ ತೊಂದರೆ, ಉಡುಪಿ ಬ್ರಹ್ಮಗಿರಿ ಸರ್ಕಲ್ ಬಳಿಯ ಗೂಡಂಗಡಿಯಲ್ಲಿ ಸಾರ್ವಜನಿಕವಾಗಿ ಸಿಗರೇಟ್ ಸೇವನೆ, ಕುಂದಾಪುರ ಕುಂಭಾಶಿ ಮತ್ತು ಕಾರ್ಕಳ ನಗರದಲ್ಲಿ ಅನಧಿಕೃತವಾಗಿ ಪಟಾಕಿ ಮಾರಾಟ, ಶಂಕರನಾರಾಯಣ ಚಿಟ್ಫಂಡ್ನಲ್ಲಿ ಮೋಸ, ಪಡುಬಿದ್ರಿ ಹೆಜಮಾಡಿ ಶಾಂಭವಿ ನದಿಪಾತ್ರದಲ್ಲಿ ಮತ್ತು ಶಂಕರನಾರಾ ಯಣ ಸೌಡ ಪರಿಸರದಲ್ಲಿ ಅಕ್ರಮ ಮರಳುಗಾರಿಕೆ, ಉಡುಪಿ ಅಂಬಾಗಿಲು ಪರಿಸರದಲ್ಲಿ ಅಕ್ರಮ ಬಡ್ಡಿ ವ್ಯವಹಾರದ ಬಗ್ಗೆ ದೂರುಗಳು ಬಂದವು. ಹೀಗೆ ಇಂದು ಒಟ್ಟು 29 ಸಾರ್ವ ಜನಿಕರು ಕರೆ ಮಾಡಿ ದೂರುಗಳನ್ನು ನೀಡಿದರು.
ಅನಧಿಕೃತ ಏಜೆಂಟ್ಗಳ ವಿರುದ್ಧ ಕ್ರಮ
ಗಲ್ಫ್ ದೇಶದಲ್ಲಿ ಹೆಚ್ಚಿನ ಸಂಬಳದ ಆಮಿಷ ತೋರಿಸಿ ಜನರಿಂದ ಹಣ ಪಡೆದು ವಂಚಿಸುವ ಅನಧಿಕೃತ ಏಜೆಂಟ್ಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದರು.
ಸೌದಿ ಅರೆಬಿಯಾ ದೇಶದ ರಿಯಾದ್ನ ಭಾರತೀಯ ರಾಯಭಾರಿ ಕಚೇರಿಯಿಂದ ಕಳುಹಿಸಲಾದ ಪತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಗಲ್ಫ್ ದೇಶದಲ್ಲಿ ಹೆಚ್ಚಿನ ಸಂಬಳ ಸಿಗುವ ಆಸೆಯಿಂದ ಅನಧಿಕೃತ ಏಜೆಂಟ್ಗಳ ಅಮಿಷಕ್ಕೆ ಒಳಗಾಗಿ ಮೋಸ ಹೋಗುತ್ತಿದ್ದು, ಇದರಲ್ಲಿ ಮನೆ ಕೆಲಸಕ್ಕೆ ಹೋಗುವ ಮಹಿಳೆಯರು ಹೆಚ್ಚಾಗಿ ಬಲಿಪಶುಗಳಾಗುತ್ತಿ ದ್ದಾರೆ. ಆದುದರಿಂದ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅನಧಿಕೃತ ಏಜೆಂಟ್ಗಳ ಮೇಲೆ ಕಾನೂನು ಕ್ರಮ ಜರಗಿಸುವಂತೆ ತಿಳಿಸಲಾಗಿದೆ ಎಂದರು.
ಈ ಕುರಿತು ರಾಜ್ಯ ಸರಕಾರ ರಾಜ್ಯದ ಎಲ್ಲ ಜಿಲ್ಲೆ ಎಸ್ಪಿಗಳಿಗೆ ಸುತ್ತೋಲೆ ಹೊರಡಿಸಿ, ಅನಧಿಕೃತ ಏಜೆಂಟ್ಗಳ ಬಗ್ಗೆ ಠಾಣಾ ಮಟ್ಟದಲ್ಲಿ ಬೀಟ್ ಸಭೆ ಹಾಗೂ ಇತರ ಜಾಗೃತಿ ಕಾರ್ಯಕ್ರಮ ನಡೆಸಿ, ಅನಧಿಕೃತವಾಗಿ ಈ ದಂಧೆ ಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿ ಸಲು ಸೂಚಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.







