ಮುಂಬೈ: ರೈಲ್ವೆ ನಿಲ್ದಾಣಗಳ ಸ್ಟಾಲ್‌ಗಳಲ್ಲಿ ಎಂಎನ್‌ಎಸ್ ಕಾರ್ಯಕರ್ತರಿಂದ ದಾಂಧಲೆ

ಥಾಣೆ, ಅ. 21: ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ ಸೇರಿದವರು ಎಂದು ಹೇಳಲಾದ ಕಾರ್ಯಕರ್ತರ ಗುಂಪೊಂದು ಇಲ್ಲಿನ ರೈಲ್ವೇ ಸೇತುವೆಯಲ್ಲಿದ್ದ 12ಕ್ಕೂ ಅಧಿಕ ಅಕ್ರಮ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. ರಾಜ್ ಠಾಕ್ರೆ ನೇತೃತ್ವದ ಪಕ್ಷದ ಕಾರ್ಯಕರ್ತರು ಕಲ್ಯಾಣ್ ರೈಲು ನಿಲ್ದಾಣದ ಹೊರಗಿರುವ ಅಂಗಡಿಗಳನ್ನು ಗುರಿಯಾಗಿರಿಸಿ ಕೂಡ ಕಾರ್ಯಾಚರಣೆ ನಡೆಸಿದರು.
ಕಳೆದ ತಿಂಗಳು 23 ಜನರ ಸಾವಿಗೆ ಕಾರಣವಾದ ಎಲ್ಫಿನ್‌ಸ್ಟನ್ ರೋಡ್ ಕಾಲ್ತುಳಿತಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ರೈಲ್ವೇ ನಿಲ್ದಾಣದ ಹೊರ ಭಾಗದಲ್ಲಿರುವ ಬೀದಿ ಬದಿ ವ್ಯಾಪಾರದಿಂದ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿ ಈ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸುಮಾರು 25ಕ್ಕೂ ಅಧಿಕ ಕಾರ್ಯಕರ್ತರು ಇಂದು ಬೆಳಗ್ಗೆ ಸಟೀಸ್ ಸೇತುವೆಗೆ ಆಗಮಿಸಿದರು ಹಾಗೂ ಅಲ್ಲಿ ವ್ಯಾಪಾರ ಮಾಡುತ್ತಿದ್ದ 12ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದರು. ಈ ಘಟನೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಾಗ, ಘಟನೆ ಬಗ್ಗೆ ನಾವು ಇದುವರೆಗೆ ದೂರು ಸ್ವೀಕರಿಸಿಲ್ಲ ಎಂದಿದ್ದಾರೆ. ಎಂಎನ್‌ಎಸ್‌ನ ಥಾಣೆ ನಗರ ಘಟಕದ ಅಧ್ಯಕ್ಷ ಅವಿನಾಶ್ ಜಾಧವ್ ಹಾಗೂ ಪಕ್ಷದ ಸ್ಥಳೀಯ ಯುವ ಘಟಕದ ವರಿಷ್ಠ ಸಂದೀಪ್ ಪಂಚಾಂಗೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.





