1 ವರ್ಷದಲ್ಲಿ 380 ಪೊಲೀಸರು ಹುತಾತ್ಮರು

ಹೊಸದಿಲ್ಲಿ, ಅ. 21: ಕಳೆದ ಒಂದು ವರ್ಷದಲ್ಲಿ ಗಡಿ ರಕ್ಷಣಾ ಪಡೆಯಂತಹ ಕೇಂದ್ರೀಯ ಮೀಸಲು ಪಡೆ ಸೇರಿದಂತೆ 380ಕ್ಕೂ ಅಧಿಕ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಹತ್ಯೆಯಾಗಿದ್ದಾರೆ ಎಂದು ಭಾರತದ ಅತ್ಯುನ್ನತ ದೇಶೀ ಬೇಹುಗಾರಿಕೆ ಸೇವಾ ಸಂಸ್ಥೆ ತಿಳಿಸಿದೆ. ಕಳೆದ ವರ್ಷ ಹತ್ಯೆಗೀಡಾದ 383 ಪೊಲೀಸರಲ್ಲಿ 56 ಗಡಿ ಭದ್ರತಾ ಪಡೆಗೆ ಸೇರಿದ ಪೊಲೀಸರು, 42 ಜಮ್ಮು ಹಾಗೂ ಕಾಶ್ಮೀರದ ಪೊಲೀಸರು ಎಂದು ಇಂಟಲಿಜೆನ್ಸ್ ಬ್ಯುರೊದ ನಿರ್ದೇಶಕ ರಾಜೀವ್ ಜೈನ್ ಇಂದಿಲ್ಲಿ ನಡೆದ ಪೊಲೀಸ್ ಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.
ಉತ್ತರಪ್ರದೇಶದ 76, ಕೇಂದ್ರ ಮೀಸಲು ಪಡೆಯ 49, ಛತ್ತೀಸ್‌ಗಢದ 23, ಪಶ್ಚಿಮಬಂಗಾಳದ 16, ದಿಲ್ಲಿ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ತಲಾ 13, ಬಿಹಾರ್ ಹಾಗೂ ಕರ್ನಾಟಕದ ತಲಾ 12 ಹಾಗೂ ಇಂಡೋ ಟಿಬೇಟಿಯನ್ ಗಡಿ ಪೊಲೀಸ್‌ನ 11 ಮಂದಿ ಪೊಲೀಸರು ಹತ್ಯೆಗೀಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ ಹೆಚ್ಚಿನ ಪೊಲೀಸರು ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿಯಲ್ಲಿ, ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದಲ್ಲಿ ಹಾಗೂ ನಕ್ಸಲೀಯರೊಂದಿಗೆ ನಡೆದ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದರು.
ಪೊಲೀಸ್ ಸ್ಮರಣ ದಿನಾಚರಣೆ
1959ರಲ್ಲಿ ಚೀನಾ ಸೇನಾ ಪಡೆಯ ಗುಂಡಿನ ದಾಳಿಗೆ 10 ಪೊಲೀಸರು ಹುತಾತ್ಮರಾಗಿದ್ದರು. ಈ ದಿನವನ್ನು ಪೊಲೀಸ್ ಸ್ಮರಣ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.







