ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು: ಚಂಪಾ

ಮೈಸೂರು, ಅ.21: ಲಿಂಗಾಯತ ಸಮುದಾಯಯಕ್ಕೆ ಸಂವಿಧಾನ ಬದ್ಧವಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು ಎಂದು 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರ ಹಾಗೂ ಕವಿ, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟರು.
ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಲಿಂಗಾಯತ ಸಮುದಾಯದ ಪರವಾಗಿದ್ದೇನೆ. ರಂಭಾಪುರಿ ಮಠದ ಸ್ವಾಮೀಜಿ, ಕೆಲ ವಿರಕ್ತ ಮಠಗಳವರು ಇದನ್ನು ವಿರೋಧಿಸುತ್ತಿದ್ದಾರೆ. ಬೌದ್ಧ, ಜೈನ, ಸಿಖ್ ಧರ್ಮಗಳಿಗೆ ನೀಡಿರುವಂತೆ ಲಿಂಗಾಯತ ಸಮುದಾಯಕ್ಕೂ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ನೀಡಲಿ ಎಂದು ಆಗ್ರಹಿಸಿದರು.
ಯಾವುದೇ ವೇದ, ಪುರಾಣಗಳಲ್ಲಿ ಹಿಂದೂ ಧರ್ಮದ ಪ್ರಸ್ತಾಪವೇ ಇಲ್ಲ. ಅದು ವೈದಿಕರ ಹುನ್ನಾರದಿಂದ ಸೇರ್ಪಡೆಯಾಗಿದೆ. ಹಿಂದೂ ಪದಕ್ಕೆ ಸ್ಪಷ್ಟ ನಿರ್ವಚನವೇ ಇಲ್ಲ. ಬ್ರಾಹ್ಮಣ, ಲಿಂಗಾಯತ ಸಮುದಾಯಗಳ ಸೇರಿದಂತೆ ಎಲ್ಲ ಜಾತಿಗಳಲ್ಲೂ ವೈಚಾರಿಕತೆಗೆ ವಿರುದ್ಧವಾದ ಪುರೋಹಿತ ಶಾಹಿ ಇದೆ. ಅದನ್ನು ನಿವಾರಿಸಲು ಪ್ರಗತಿಪರರು, ಚಿಂತಕರು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ನಿರಂತರ: ವಾಕ್ ಸ್ವಾತಂತ್ರ್ಯದ ಮೇಲೆ ಹಿಂದಿನಿಂದಲೂ ದಾಳಿ ನಡೆಯುತ್ತಲೇ ಇದೆ. ಅದರಲ್ಲಿಯೂ 1975ರ ತುರ್ತು ಪರಿಸ್ಥಿತಿ ಸಂದರ್ಭದಿಂದ ಅದು ಹೆಚ್ಚಾಗಿದೆ. ಬೇರೆ ಬೇರೆ ರೀತಿಯಲ್ಲಿ ಅಭಿವ್ಯಕ್ತಿ ಹಕ್ಕಿನ ಚ್ಯುತಿಗೆ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳ ಜವಾಬ್ದಾರಿ ಏನು ಎಂಬುದನ್ನು ಚಿಂತಿಸಬೇಕಾಗುತ್ತದೆ ಎಂದು ತಿಳಿಸಿದರು.
ಯಾವುದೇ ವಿಚಾರವಾದಿ, ಸಮಾಜವಾದಿ ಅಥವಾ ಯಾರೇ ಆದರೂ ಹತ್ಯೆಗೀಡಾದರೆ ಅದಕ್ಕೆ ಮಾನವೀಯ ಕಾರಣವಿದ್ದರೆ ಎಲ್ಲರೂ ಅದನ್ನು ಏಕಪ್ರಕಾರವಾಗಿ ಖಂಡಿಸಬೇಕು. ಬದುಕಿನ ಜಂಜಾಟದಲ್ಲಿ ಜಾಣ್ಮೆ, ವಿವೇಕದಿಂದ ವರ್ತಿಸಿದರೆ ಸಂಘರ್ಷ ಮುಕ್ತವಾಗಿರಬಹುದು. ಸಾಹಿತಿಗಳು ಅಸಮಾನ್ಯರಲ್ಲ. ಆದರೆ, ವಾಸ್ತವದ ಚೌಕಟ್ಟಿನಲ್ಲಿ ಹೇಳಬೇಕಾದ್ದನ್ನು ಕಲಾತ್ಮಕವಾಗಿ ವಿವರಿಸುವುದರಿಂದ ವಿಶೇಷವಾಗಿ ಕಾಣಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಧರ್ಮ ನಿರಪೇಕ್ಷ ಪಕ್ಷ ಬೇಕು: ಈಗಿನ ರಾಷ್ಟ್ರೀಯ ಪಕ್ಷಗಳು ಧರ್ಮದ ಹೊರತಾಗಿ ಆಡಳಿತ ನಡೆಸುವುದು ಕಷ್ಟ. ಹಾಗಾಗಿ ನಾವು ನೆಲಮೂಲದ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದು ಸೂಕ್ತ. ಅವು ಧರ್ಮ ನಿರಪೇಕ್ಷವಾಗಿರುತ್ತವೆ. ಹಾಗಾಗಿಯೇ ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಚಿಸಿದ್ದ ಕೆಜೆಪಿಯ ಕಾರ್ಯಕಾರಿಣಿ ಸದಸ್ಯನಾಗಿದ್ದೆ. ಆದರೆ, ಅವರು ಒಂದು ರೀತಿಯಲ್ಲಿ ಜನತೆಗೆ ದ್ರೋಹ ಬಗೆದರು. ನಂತರ ಅವರು ಮಾತೃಪಕ್ಷಕ್ಕೆ ತೆರಳಿದರು. ನಾನು ನನ್ನ ಕ್ಷೇತ್ರಕ್ಕೆ ವಾಪಸ್ ಆದೆ ಎಂದು ಪ್ರತಿಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಉಪಸ್ಥಿತರಿದ್ದರು.
ಕನ್ನಡ ಕಡ್ಡಾಯವಾಗುವವರೆಗೂ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುವುದು ಅನಾವಶ್ಯಕ ಎಂಬ ದೇವನೂರು ಮಹದೇವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅವರ ಅಭಿಪ್ರಾಯಕ್ಕೆ ನಾನೂ ಗೌರವಿಸುತ್ತೇನೆ. ಆದರೆ ರಾಜ್ಯದಲ್ಲಿ ಕನ್ನಡದ ಸಮಸ್ಯೆಗಳ ಬಗ್ಗೆ ಚರ್ಚೆಮಾಡುವ ಸಲುವಾಗಿ ಮತ್ತು ಕನ್ನಡತನವನ್ನು ಗಟ್ಟಿಗೊಳಿಸಲು ಕನ್ನಡ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಹೆಚ್ಚು ಆಗಬೇಕು.
ಚಂದ್ರಶೇಖರ ಪಾಟೀಲ್, ಸಾಹಿತಿ







