ಹುತಾತ್ಮರನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ: ಶ್ರೀರಂಗಯ್ಯ

ಚಿಕ್ಕಮಗಳೂರು, ಅ.21: ದೇಶಕ್ಕಾಗಿ ಸೇವೆ ಸಲ್ಲಿಸಿ ಹುತಾತ್ಮರಾದವರನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.
ಅವರು ಶನಿವಾರ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲುಪಡೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡುತ್ತಿದ್ದ ಅವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಬಾಹ್ಯ ಶತ್ರುಗಳ ದಾಳಿಯಿಂದ ದೇಶದ ಗಡಿಯಲ್ಲಿ ಸೇನಾಪಡೆ ಸಾರ್ವಜನಿಕರಿಗೆ ರಕ್ಷಣೆ ಮಾಡುತ್ತಿದ್ದಾರೆ. ಆಂತರಿಕವಾಗಿ ಸಮಾಜದ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಸೇವೆ ಶ್ಲಾಘನೀಯ. ಕರ್ತವ್ಯ ಸಮಯದಲ್ಲಿ ಮೃತ ಪಟ್ಟ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕುಟುಂಬಕ್ಕೆ ಧೈರ್ಯ, ಸಾಂತ್ವನ ಹೇಳುವುದರ ಜೊತೆಗೆ ಮಾನಸಿಕ ಧೈರ್ಯವನ್ನು ಕೂಡ ಹೇಳಬೇಕಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕೆ.ಅಣ್ಣಾಮಲೈ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ 370 ಜನ ಹುತಾತ್ಮರಾಗಿದ್ದು, ಕರ್ನಾಟಕದ 12 ಜನ ಅಧಿಕಾರಿ-ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ನಗರದ ವಿವಿಧ ಕ್ಷೇತ್ರದ ಗಣ್ಯರು, ಪ್ರಮುಖರುಗಳು ಹಾಗೂ ವಿವಿಧ ಅಧಿಕಾರಿಗಳು ಹುತಾತ್ಮರಾದ ಪೊಲೀಸರಿಗೆ ಗೌರವ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಚ್. ಜಗದೀಶ್ ಹಾಗೂ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.







