ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರ: ನ್ಯಾ.ಡಿ.ಪನೇಶ್
ಮಡಿಕೇರಿ, ಅ.21: ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ.ಪವನೇಶ್, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಲೆಪ್ಟಿನೆಂಟ್ ಜನರಲ್ (ನಿವೃತ್ತ) ಬಿ.ಸಿ.ನಂದ, ಪೊಲೀಸ್ ಅಧೀಕ್ಷಕರ ಪರವಾಗಿ ಅಪ್ಪಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿ ಪರವಾಗಿ ನಾಗಪ್ಪ, ಸುಂದರರಾಜ್, ಪೊಲೀಸ್ ನಿರೀಕ್ಷಕ ಮೇದಪ್ಪ, ಜಿಲ್ಲಾ ಶಸಸ್ತ್ರ ಪಡೆಯ ತಿಮ್ಮಪ್ಪಗೌಡ, ನಗರಸಭೆ ಪರವಾಗಿ ಕಾವೇರಮ್ಮ ಸೋಮಣ್ಣ, ವೈದ್ಯಕೀಯ ಕಾಲೇಜು ಪರವಾಗಿ ನಿರ್ದೇಶಕ ಮಹೇಂದ್ರ, ರೋಟರಿ ಕ್ಲಬ್ ಪರವಾಗಿ ಪ್ರೀತಂ, ವಕೀಲರ ಪರವಾಗಿ ಸಿ.ಟಿ.ಜೋಸೆಫ್, ಮಾಧ್ಯಮಗಳ ಪರವಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಿವೃತ್ತ ಪೊಲೀಸ್ ಅಧಿಕಾರಿಗಳ ಪರವಾಗಿ ನಂಜಪ್ಪ, ಪೊಲೀಸ್ ನಿರೀಕ್ಷಕರ ಪರವಾಗಿ ಜಗದೀಶ್, ಸಹಾಯಕ ಪೊಲೀಸ್ ಅಧಿಕಾರಿಗಳ ಪರವಾಗಿ ದೇವಯ್ಯ, ಮಹಿಳಾ ಪೊಲೀಸರ ಪರವಾಗಿ ಅಚ್ಚಮ್ಮ, ಪೊಲೀಸರ ಪರವಾಗಿ ಎಂ.ಟಿ.ಮಹದೇವ, ಮನಮೋಹನ್, ಮೊಹಿದ್ದೀನ್ ಇತರರು ಪೊಲೀಸ್ ಹುತಾತ್ಮರ ಪ್ರತಿಮೆಗೆ ಹೂಗುಚ್ಛ ಅರ್ಪಿಸಿ ಗೌರವ ನಮನ ಸಮರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ.ಪವನೇಶ್ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರವಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ಕೊಡಗಿನ ಪೊಲೀಸರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಡಗು ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಸಮಾಜದಲ್ಲಿ ಶಾಂತಿಗಾಗಿ ಪೊಲೀಸರು ದಿನದ 24 ಗಂಟೆಯೂ ಜಾಗೃತರಾಗಿ ಕೆಲಸ ನಿರ್ವಹಿಸುತ್ತಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ದೇಶದಲ್ಲಿ ನಾಗರಿಕರ ರಕ್ಷಣೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರ ಎಂದು ಅವರು ಹೇಳಿದರು.
ಪೊಲೀಸರು ತಮ್ಮ ಆತ್ಮ ರಕ್ಷಣೆಯನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಮುಂದಾಗುತ್ತಾರೆ. ಪೊಲೀಸರ ಸೇವೆ ಸದಾ ಸ್ಮರಣೀಯ. ಕಠಿಣ ಸಂದರ್ಭದಲ್ಲಿ ಸಮಸ್ಯೆ ಹಾಗೂ ಸವಾಲುಗಳನ್ನು ಬಗೆಹರಿಸುವಲ್ಲಿ ಪೊಲೀಸರ ಪಾತ್ರ ದೊಡ್ಡದು ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿದೇವಯ್ಯ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಸ್.ಪ್ರಕಾಶ್, ಸದಸ್ಯರಾದ ಜುಲೇಕಾಬಿ, ಅನಿತಾ ಪೂವಯ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.







