ಎಲ್ಲ ಗ್ರಾಮಗಳಿಗೆ ನರ್ಮ್ ಬಸ್ ವ್ಯವಸ್ಥೆ: ಸಚಿವ ಪ್ರಮೋದ್

ಉಡುಪಿ, ಅ.21: ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನರ್ಮ್ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ರಾಜ್ಯ ಮೀನು ಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ನಗರಸಭೆ ವತಿಯಿಂದ ಶನಿವಾರ ನಗರಸಭೆ ಕಚೇರಿ ಸಭಾಂಗಣ ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ಒಂದು ಕೋಟಿ ರೂ. ಅನುದಾನದಡಿ ವಿದ್ಯಾರ್ಥಿ ವೇತನ ಹಾಗೂ ವಿವಿಧ ಸವಲತ್ತು ಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.
ಉಡುಪಿ ನಗರಸಭೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನು ಭವಿಗಳಿಗೆ ಶೇ.24.10 ನಿಧಿಯಡಿಯಲ್ಲಿ ವಿವಿಧ ಸವಲತ್ತುಗಳನ್ನು ನೀಡಲು ಒಟ್ಟು 7.05 ಲಕ್ಷ ರೂ. ವಿದ್ಯಾರ್ಥಿವೇತನಕ್ಕಾಗಿ ಕಾಯ್ದಿರಿಸಿದ್ದು, ಅದರಲ್ಲಿ 3.45 ಲಕ್ಷ ರೂ. ವಿತರಿಸಲಾಗಿದೆ. ಅಡುಗೆ ಅನಿಲ ಸಂಪರ್ಕಕ್ಕಾಗಿ 1.84ಲಕ್ಷ ರೂ., ಶೌಚಾಲಯ ನಿರ್ಮಾಣಕ್ಕಾಗಿ 12 ಲಕ್ಷ ರೂ. ಹಾಗೂ ಆರೋಗ್ಯ ವಿಮೆ ಪ್ರೀಮಿಯಂ ಮೊತ್ತ 50 ಲಕ್ಷ ರೂ. ಒಟ್ಟು 70.89 ಲಕ್ಷ ರೂ. ಅನುದಾನ ವಿತರಿಸಲಾಗುತ್ತಿದೆ ಎಂದರು.
ಶೇ.7.25ರ ನಿಧಿಯಡಿ ಇತರೆ ಬಡಜನರ ಕಲ್ಯಾಣಕ್ಕಾಗಿ ಒಟ್ಟು 7.95 ಲಕ್ಷ ರೂ ಅನುದಾನವನ್ನು ವಿದ್ಯಾರ್ಥಿವೇತನಕ್ಕಾಗಿ ಕಾಯ್ದಿರಿಸಿದ್ದು, ಅದರಲ್ಲಿ 7.05 ಲಕ್ಷ ರೂ. ವಿತರಿಸಲಾಗಿದೆ. ಮನೆ ದುರಸ್ಥಿಗೆ 1.60 ಲಕ್ಷ ರೂ, ಅಡುಗೆ ಅನಿಲ ಸಂಪರ್ಕಕ್ಕಾಗಿ 1.94 ಲಕ್ಷ ರೂ., ಶೌಚಾಲಯ ನಿರ್ಮಾಣಕ್ಕಾಗಿ 18.12ಲಕ್ಷ ರೂ. ಒಟ್ಟು 29.61ಲಕ್ಷ ರೂ. ಅನುದಾನ ವಿತರಿಸಲಾಗುತ್ತಿದೆಂದು ಸಚಿವರು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತ ಡಿ.ಮಂಜು ನಾಥಯ್ಯ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಕಕ್ಕುಂಜೆ ಉಪಸ್ಥಿತರಿದ್ದರು.







