ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅವಕಾಶವಿಲ್ಲ: ಅಭಿನವ್ ಖರೆ ಸ್ಪಷ್ಟನೆ

ಶಿವಮೊಗ್ಗ, ಅ. 21: ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಸ್ಪಷ್ಟಪಡಿಸಿದ್ದಾರೆ.
ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಶಿಕಾರಿಪುರದಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಅನಾಹುತು: ದೀಪಾವಳಿ ಹಬ್ಬದ ನಂತರ ಸುಮಾರು ಒಂದು ತಿಂಗಳ ಕಾಲ ಜಿಲ್ಲೆಯ ವಿವಿಧೆಡೆ ಹೋರಿ ಬೆದರಿಸುವ ಸ್ಪರ್ಧೆಗಳು ನಡೆಯುತ್ತವೆ. ಕಳೆದ ಹಲವು ದಶಕಗಳಿಂದ ಈ ಸ್ಪರ್ಧೆಗಳು ನಡೆದುಕೊಂಡು ಬರುತ್ತಿವೆ. ಅದರಲ್ಲಿಯೂ ಶಿಕಾರಿಪುರ, ಶಿವಮೊಗ್ಗ, ಸೊರಬ ತಾಲೂಕುಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಕರು ಆಯೋಜಿಸುತ್ತಾರೆ. ಸ್ಪರ್ಧೆಯಲ್ಲಿ ವಿಜೇತ ಹೋರಿ ಮಾಲಕರಿಗೆ ನಗದು, ಬಂಗಾರ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುತ್ತದೆ. ಹಾಗೆಯೇ ಹೋರಿಗಳನ್ನು ಹಿಡಿಯುವಲ್ಲಿ ಸಫಲವಾದವರಿಗೂ ಬಹುಮಾನ ಕೊಡಲಾಗುತ್ತದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಹೋರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರೂ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಇತ್ತೀಚೆಗೆ ಈ ಸ್ಪರ್ಧೆಗಳಲ್ಲಿ ಸಾವು-ನೋವುಗಳು ಸಂಭವಿಸಲಾರಂಭಿಸಿದ್ದವು. ಹೋರಿಗಳ ತಿವಿತದಿಂದ ಕೆಲವರು ಸಾವನ್ನಪ್ಪಿದ್ದರು. ಮತ್ತೆ ಕೆಲವರು ಗಂಭೀರವಾಗಿ ಗಾಯಗೊಳ್ಳುತ್ತಿದ್ದರು. ಹೋರಿ ಹಿಡಿಯುವ ವೇಳೆ ಉಂಟಾಗುತ್ತಿದ್ದ ನೂಕಾಟ, ತಳ್ಳಾಟದಿಂದಲೂ ಹಲವರು ಸಾವು-ನೋವಿಗೆ ತುತ್ತಾಗುತ್ತಿದ್ದರು. ಈ ಎಲ್ಲ ಕಾರಣಗಳಿಂದ ಹೋರಿ ಬೆದರಿಸುವ ಸ್ಪರ್ಧೆಯ ಮೇಲೆ ನಿರ್ಬಂಧ ಹೇರಬೇಕೆಂಬ ಆಗ್ರಹ ಕೆಲ ವಲಯದಿಂದ ಕೇಳಿಬಂದಿತ್ತು. ಇನ್ನೊಂದೆಡೆ ಈ ಸ್ಪರ್ಧೆಯ ಮೇಲೆ ನಿರ್ಬಂಧ ಹೇರುವುದಕ್ಕೆ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದವರು ಆಕ್ಷೇಪ ವ್ಯಕ್ತಪಡಿಸಿದರು.
ಪರ-ವಿರೋಧ ಚರ್ಚೆಯ ನಡುವೆ ಕಳೆದ ವರ್ಷ ಜಿಲ್ಲಾಡಳಿತವು ಹೋರಿ ಬೆದರಿಸುವ ಸ್ಪರ್ಧೆಯ ಮೇಲೆ ನಿರ್ಬಂಧ ಹೇರಿತ್ತು. ತಾಲೂಕು ಆಡಳಿತಗಳಿಂದ ಅನುಮತಿ ಪಡೆಯಬೇಕು ಎಂದು ಆಯೋಜಕರಿಗೆ ತಿಳಿಸಿತ್ತು. ಸ್ಥಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಅನುಮತಿಯಿಲ್ಲದೆ ಸ್ಪರ್ಧೆ ಆಯೋಜಿಸಿದರೆ ಕಾನೂನು ರೀತಿಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು. ಇದೀಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರು ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅವಕಾಶವಿಲ್ಲ. ಅನುಮತಿಯೂ ನೀಡುವುದಿಲ್ಲ. ನಿಯಮ ಉಲ್ಲಂಘಿಸಿ ಸ್ಪರ್ಧೆ ಆಯೋಜಿಸಿದರೆ ಶಿಸ್ತು ಕ್ರಮ ಜರುಗಿಸವುದಾಗಿ ಎಚ್ಚರಿಕೆ ನೀಡಿದ್ದಾರೆ.







