ರಾಜ್ಯ ಸರಕಾರ ಪೊಲೀಸರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ: ಡಾ.ಎಂ.ಎಂ.ಸಲೀಂ

ದಾವಣಗೆರೆ, ಅ.21: ಹುತಾತ್ಮ ಪೊಲೀಸರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವ ಎಲ್ಲ ಪೋಲಿಸರಿಗೆ ಮಾದರಿ ಎಂದು ಪೂರ್ವ ವಲಯದ ಪೋಲಿಸ್ ಮಹಾನಿರೀಕ್ಷಕ ಡಾ.ಎಂ.ಎಂ. ಸಲೀಂ ಹೇಳಿದರು.
ಶನಿವಾರ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಲಾಗಿದ್ದ “ ಪೊಲೀಸ್ ಹುತಾತ್ಮರ “ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಪೊಲೀಸರು ಪ್ರತೀ ವರ್ಷ ಹುತಾತ್ಮರಾಗುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ಗಡಿ ಪ್ರದೇಶ ಸೇರಿದಂತೆ ಒಟ್ಟು 370 ಪೊಲೀಸರು ಹುತಾತ್ಮರಾಗಿರುವುದು ವಿಷಾದನೀಯ. ಸರ್ಕಾರ ಪೊಲೀಸರ ಕಲ್ಯಾಣಕ್ಕಾಗಿ ಹಲವು ಯೋಜನೆ ರೂಪಿಸಿದೆ. ದಾವಣಗೆರೆಯಲ್ಲಿ 180 ಪೊಲೀಸ್ ವಸತಿ ಗೃಹಗಳು, ಮತ್ತು ರಾಜ್ಯದಲ್ಲಿ 8500 ವಸತಿಗೃಹಗಳ ನಿರ್ಮಾಣವಾಗುತ್ತಿದೆ. ಕೊಂಡಜ್ಜಿಯಲ್ಲಿ 15 ಎಕರೆ ಪ್ರದೇಶದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಸೈನಿಕರಿಗೆ ಇರುವ ಮಾದರಿಯಲ್ಲಿ ಪೊಲೀಸ್ ಕ್ಯಾಂಟೀನ್ ವ್ಯವಸ್ಥೆ, ಪಾರದರ್ಶಕ ನೇಮಕಾತಿ, ಬಡ್ತಿ, ಆರೋಗ್ಯ, ವಸತಿ ಸೇರಿದಂತೆ ಪೋಲಿಸರ ಕಲ್ಯಾಣಕ್ಕಾಗಿ ಸರ್ಕಾರ ಸಕಲ ಪ್ರಯತ್ನ ಮಾಡುತ್ತಾ ಪೊಲೀಸರ ಜೀವನ ಸುಧಾರಣೆಗಾಗಿ ಉತ್ತಮ ಯೋಜನೆಗಳನ್ನು ಕೈಗೊಂಡಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಭೀಮಾಶಂಕರ ಎಸ್. ಗುಳೇದ್ ಮಾತನಾಡಿ, ನಮ್ಮ ಸುತ್ತಲಿನ ಸಮಾಜ ಪೋಲೀಸರ ಬೆಂಬಲಕ್ಕೆ ನಿಂತರೆ ಮಾತ್ರ ಆರೋಗ್ಯಕರ ಮತ್ತು ಶಾಂತಿಯುತ ಸಮಾಜ ನಿರ್ಮಿಸಲು ಸಾಧ್ಯ ಎಂದ ಅವರು, ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಸಮಾಜ ಅವರನ್ನು ಒಬ್ಬಂಟಿ ಮಾಡಿ, ಈ ಕೆಲಸದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹಿಂದೆ ಸರಿಯುವ ಬದಲು, ಅವರಿಗೆ ಮೊದಲು ರಕ್ಷಣೆ ಮತ್ತು ಸಹಕಾರ ನೀಡಬೇಕು. ಪೊಲೀಸರು ಕುಟುಂಬವನ್ನು ಮರೆತು ರಕ್ಷಣೆಯಲ್ಲಿ ಭಾಗಿಯಾಗಿರುತ್ತಾರೆ. ಆದ್ದರಿಂದ ಸಂದಿಗ್ಧ ಪರಿಸ್ಥಿತಿ ಮತ್ತು ಕಾನೂನು ಸುವ್ಯವಸ್ಥೆ ಸಂದರ್ಭ ಸಮಾಜ ಕೈಜೋಡಿಸಿದಾಗ ಮಾತ್ರ ಹುತ್ಮಾತರಾಗುವ ಪೊಲೀಸರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತಾನಾಡಿ, ಹುತ್ಮಾತ ಯೋಧರನ್ನು ಸ್ಮರಿಸುವುದು, ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಇಂತಹ ಪೊಲೀಸ್ ಹುತಾತ್ಮರ ದಿನಾಚರಣೆಗಳು ಇತರೇ ಪೊಲೀಸರ ಕರ್ತವ್ಯ ನಿರ್ವಹಣೆಗೆ ಸ್ಪೂರ್ತಿ ಮತ್ತು ಮಾದರಿ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸ್ ಸಿಬ್ಬಂದಿ ವರ್ಗದವರು ಮತ್ತು ಕಾರ್ಯನಿರತ ಪೊಲೀಸ್ ಸಿಬ್ಬಂದಿ ಇದ್ದರು.







