ನಾಳೆಯಿಂದ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿ
ಭಾರತಕ್ಕೆ ಸರಣಿ ಗೆಲುವಿನ ಚಿತ್ತ

ಮುಂಬೈ, ಅ.21: ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನಲ್ಲಿ ರವಿವಾರ ನಡೆಯಲಿದ್ದು, ಭಾರತ ಕ್ಲೀನ್ ಸ್ವೀಪ್ ಸಾಧಿಸುವ ಯೋಜನೆಯಲ್ಲಿದೆ.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 4-1 ಅಂತರದಲ್ಲಿ ಗೆಲುವು ದಾಖಲಿಸಿದ್ದ ಭಾರತಕ್ಕೆ ನ್ಯೂಝಿಲೆಂಡ್ ವಿರುದ್ಧ ಸವಾಲು ಕಠಿಣವಲ್ಲ. ಆದರೆ ನ್ಯೂಝಿಲೆಂಡ್ ಗೆಲುವಿಗೆ ಪ್ರಯತ್ನ ನಡೆಸಲಿದೆ.
ಟೀಮ್ ಇಂಡಿಯಾವನ್ನು ತವರಿನಲ್ಲಿ ಮಣಿಸುವುದು ಕಷ್ಟ. ಈತನಕ ನ್ಯೂಝಿಲೆಂಡ್‌ಗೆ ಭಾರತದಲ್ಲಿ ಸರಣಿ ಗೆಲುವು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯ ವಿರುದ್ಧ 2009-10ರಲ್ಲಿ ಪಾಕಿಸ್ತಾನ ವಿರುದ್ಧ 2012ರಲ್ಲಿ ಭಾರತ ಸರಣಿ ಸೋಲು ಅನುಭವಿಸಿತ್ತು.
ನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಮತ್ತು ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ ಸರಣಿ ಗೆಲುವು ದಾಖಲಿಸಿತ್ತು. ಉಪನಾಯಕ ರೋಹಿತ್ ಶರ್ಮ 1 ಶತಕ ಮತ್ತು 2 ಅರ್ಧಶತಕಗಳನ್ನು ಒಳಗೊಂಡ 296 ರನ್ ದಾಖಲಿಸಿದ್ದರು.ಅಜಿಂಕ್ಯ ರಹಾನೆ 4 ಅರ್ಧಶತಕಗಳನ್ನು ಒಳಗೊಂಡ 244 ರನ್. ಹಾರ್ದಿಕ್ ಪಾಂಡ್ಯ 222 ರನ್ ಮತ್ತು ಮಹೇಂದ್ರ ಸಿಂಗ್ ಧೋನಿ ತಂಡದ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದ್ದರು.
ಭಾರತದ ಆಟಗಾರರು ಇದೇ ಪ್ರದರ್ಶನವನ್ನು ಮುಂದುವರಿಸಿದರೆ ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ಇನ್ನೊಂದು ಸರಣಿ ಗೆಲುವು ಖಚಿತ. ಭಾರತದ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ , ಯಜುವೇಂದ್ರ ಚಹಾಲ್ , ಅಕ್ಷರ್ ಪಟೇಲ್ ಸವಾಲು ನ್ಯೂಝಿಲೆಂಡ್‌ಗೆ ಎದುರಾಗಲಿದೆ. ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ವೇಗದ ಬೌಲಿಂಗ್ ದಾಳಿ ಆರಂಭಿಸಲಿದ್ದಾರೆ.
ನ್ಯೂಝಿಲೆಂಡ್ ಭಾರತದ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ದಾಖಲಿಸಿತ್ತು. ಮಾಜಿ ನಾಯಕ ಮತ್ತು ಹಿರಿಯ ಬ್ಯಾಟ್ಸ್ ಮನ್ ರಾಸ್ ಟೇಲರ್ ಶತಕ ದಾಖಲಿಸಿದ್ದರು.
ಉತ್ತಮ ಫಾರ್ಮ್‌ನಲ್ಲಿರುವ ರಾಸ್ ಟೇಲರ್, ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ ಅವರ ಬ್ಯಾಟಿಂಗ್‌ನ್ನು ನ್ಯೂಝಿಲೆಂಡ್ ಅವಲಂಭಿಸಿದೆ. ಟೇಲರ್ ಜೊತೆ ಟಾಮ್ ಲಥಾಮ್ ಎರಡನೆ ಅಭ್ಯಾಸ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ವೇಗದ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ವೇಗದ ಬೌಲಿಂಗ್ ದಾಳಿ ಆರಂಭಿಸಲಿದ್ದಾರೆ. ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನೆರ್ ಮತ್ತು ಐಶ್ ಸೋಧಿ ಭಾರತದ ಮಧ್ಯಮ ಸರದಿಯ ದಾಂಡಿಗರನ್ನು ಕಾಡಲಿದ್ದಾರೆ.
ಮೊದಲ ಪಂದ್ಯದಲ್ಲಿ ರಹಾನೆಗೆ ಅವಕಾಶವಿಲ್ಲ
ಆರಂಭಿಕ ದಾಂಡಿಗ ಶಿಖರ್ ಧವನ್ ತಂಡಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ಅವರು ನ್ಯೂಝಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಅಂತಿಮ ಹನ್ನೊಂದರ ಬಳಗದಿಂದ ದೂರ ಉಳಿಯ ಬೇಕಾಗುತ್ತದೆ.
ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸಲಿದ್ದಾರೆ. ರಹಾನೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಧವನ್ ಅನುಪಸ್ಥಿತಿಯಲ್ಲಿ ರಹಾನೆ ಚೆನ್ನಾಗಿ ಆಡಿದ್ದರೂ ಅವರಿಗೆ ಅವರ ಸ್ಥಾನ ಖಾಯಂ ಆಗಿಲ್ಲ.
ಭಾರತ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್ ಮತ್ತು ಶಾರ್ದೂಲ್ ಠಾಕೂರ್.
ನ್ಯೂಝಿಲೆಂಡ್
ಕೇನ್ ವಿಲಿಯಮ್ಸನ್(ನಾಯಕ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್‌ಹೊಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೊಲಾಸ್, ಆ್ಯಡಮ್ ಮಿಲ್ನೆ, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನೆರ್, ಟಿಮ್ ಸೌಥಿ, ರಾಸ್ ಟೇಲರ್, ಜಾರ್ಜ್ ವೋಕರ್, ಐಶ್ ಸೋಧಿ.
ಪಂದ್ಯದ ಸಮಯ: ಮಧ್ಯಾಹ್ನ 1:30ಕ್ಕೆ ಆರಂಭ.







