ಮಾಲಿ, ಇಂಗ್ಲೆಂಡ್ ಸೆಮಿಫೈನಲ್ ಗೆ

ಗುವಾಹಟಿ, ಅ.21: ಘಾನಾ ತಂಡವನ್ನು ಮಣಿಸಿರುವ ಮಾಲಿ ತಂಡ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಲಿ ತಂಡ ಘಾನಾವನ್ನು 2-1 ಗೋಲುಗಳ ಅಂತರದಿಂದ ಮಣಿಸಿತು. ಬುಧವಾರ ನವಿಮುಂಬೈನಲ್ಲಿ ನಡೆಯಲಿರುವ ಅಂತಿಮ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಇರಾನ್ ಅಥವಾ ಸ್ಪೇನ್ ತಂಡವನ್ನು ಎದುರಿಸಲಿದೆ.
ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ತೇವಾಂಶದಿಂದ ಕೂಡಿರುವ ವಾತಾವರಣದಲ್ಲಿ ಉಭಯ ತಂಡಗಳು ಪೈಪೋಟಿಯಿಂದ ಆಡಿದ್ದು, ಮೊದಲಾರ್ಧದಲ್ಲಿ ಮಾಲಿ ತಂಡ ಮೇಲುಗೈ ಸಾಧಿಸಿತು. ಹಾಡ್ಜಿ ಡ್ರೇಮ್ 15ನೆ ನಿಮಿಷದಲ್ಲಿ ಮಾಲಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಡ್ರೇಮ್ ಟೂರ್ನಿಯಲ್ಲಿ ಮೂರನೆ ಗೋಲು ಬಾರಿಸಿದರು.
61ನೆ ನಿಮಿಷದಲ್ಲಿ ಜೆವೌಸ್ಸಾ ಟ್ರೊರ್ ಗೋಲು ಬಾರಿಸುವ ಮೂಲಕ ಮಾಲಿ ತಂಡಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಮುಹಮ್ಮದ್ 70ನೆ ನಿಮಿಷದಲ್ಲಿ ಪೆನಾಲ್ಟಿಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸಿ ಘಾನಾದ ಸೋಲಿನ ಅಂತರವನ್ನು ತಗ್ಗಿಸಿದರು.
2ನೆ ವಿಶ್ವಕಪ್ ಟೂರ್ನಮೆಂಟ್ ಆಡುತ್ತಿರುವ ಮಾಲಿ ತಂಡ ಎರಡನೆ ಬಾರಿ ಅಂಡರ್-17 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದೆ. ಮಾಲಿ ನಾಯಕ ಮುಹಮ್ಮದ್ 2ನೆ ಬಾರಿ ಹಳದಿಕಾರ್ಡ್ ಪಡೆದ ಕಾರಣ ಸೆಮಿ ಫೈನಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ.







