ಅ.25 ರಂದು 'ನಮ್ಮೊಳಗಿನ ಬರಗೂರು - ಒಂದು ಚಿಂತನೆ'
ಬೆಂಗಳೂರು, ಅ.21: 'ನಮ್ಮೊಳಗಿನ ಬರಗೂರು- ಒಂದು ಚಿಂತನೆ' ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಬರಗೂರು ಅವರ ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಬರಗೂರು ಆತ್ಮೀಯರ ಬಳಗ ಮತ್ತು ಬೆಂಗಳೂರು ವಿವಿ ಕಾಲೇಜು ಅಧ್ಯಾಪಕರ ಒಕ್ಕೂಟದ ಸಹಯೋಗದಲ್ಲಿ ಅ.25 ರಂದು ನಗರದ ರವೀಂದ್ರಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಸಂಚಾಲಕ ಡಾ.ರಂಗಾರೆಡ್ಡಿ ಕೋಡಿರಾಂಪುರ, ಬರಗೂರು ರಾಮಚಂದ್ರಪ್ಪ ನಾಡಿನ ಸಾಕ್ಷಿಪ್ರಜ್ಞೆಯಾಗಿ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಬರಹಗಾರರಾಗಿ ಹಲವು ಮುಖಗಳಲ್ಲಿ ಚಿರಪರಿಚಿತರಾಗಿದ್ದಾರೆ. ಹೀಗಾಗಿ, ಅವರ ಪ್ರಗತಿಪರ ವಿಚಾರಧಾರೆ ಮತ್ತು ಸಮಚಿತ್ತದ ಚಿಂತನೆಗಳಿಂದ ಪ್ರಭಾವಿತರಾಗಿರುವವರು ಸೇರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ವಿಚಾರ ಸಂಕಿರಣವನ್ನು ಲೇಖಕ ಹಾಗೂ ಸಂಸದ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಡಾ.ಬೆಳಕೆರೆ ಲಿಂಗರಾಜಯ್ಯ, ಪ್ರಕಾಶ್ ಕಂಬತ್ತಳ್ಳಿ ಪಾಲ್ಗೊಳ್ಳಿದ್ದಾರೆ ಎಂದರು.
ಈ ವೇಳೆ ಡಾ.ಬೈರಮಂಗಲ ರಾಮೇಗೌಡ ಸಂಪಾದಿಸಿರುವ ಬರಗೂರರ ಲೇಖನ ಸಂಕಲನ ‘ಬೆವರು ಬರೆದ ಬರಹ’, ಡಾ.ಬಸವರಾಜ ಡೋಣೂರು ಅವರ ‘ಶಬರಿ’ (ಆಂಗ್ಲಾನುವಾದ), ಡಾ.ಕರಿಯಪ್ಪ ಮಾಳಿಗೆ ಅವರ ‘ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬರಗೂರು’ ಕೃತಿಗಳು ಬಿಡುಗಡೆಯಾಗಲಿವೆ ಎಂದು ತಿಳಿಸಿದರು.
ಬಳಿಕ ಮಧ್ಯಾಹ್ನ 'ನಮ್ಮೊಳಗಿನ ಬರಗೂರರ ಸಾಹಿತ್ಯ ಮತ್ತು ಸಿನೆಮಾ ಪ್ರಜ್ಞೆ' ಎಂಬ ವಿಚಾರಗೋಷ್ಠಿ ಹಮ್ಮಿಕೊಂಡಿದ್ದು, ಸಾಂಸ್ಕೃತಿಕ ಪ್ರಜ್ಞೆ ಕುರಿತು ಡಾ.ರಂಗರಾಜ ವನದುರ್ಗ, ಸಾಮಾಜಿಕ ಪ್ರಜ್ಞೆ ಕುರಿತು ಆರ್.ಜಿ.ಹಳ್ಳಿ ನಾಗರಾಜ್, ಕನ್ನಡ ಪ್ರಜ್ಞೆ ಕುರಿತು ಡಾ.ಎಂ.ಎಸ್.ಆಶಾದೇವಿ ಮಾತನಾಡಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು, ಡಾ.ತೇಜಸ್ವಿ ಕಟ್ಟೀಮನಿ ಹಾಗೂ ಡಾ.ಬರಗೂರು ರಾಮಚಂದ್ರಪ್ಪ ಪಾಲ್ಗೊಳ್ಳಿದ್ದಾರೆ. ಈ ವೇಳೆ 83 ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಚಂಪಾ ಅವರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.







