ಅ.26 ರಂದು ಮುಸ್ಲಿಂ ಸಮುದಾಯದ ಸಮಾವೇಶ: ಶಬೀರ್ ಅಹ್ಮದ್ ಖಾನ್
ಬೆಂಗಳೂರು, ಅ.21: ಮೈಸೂರು ಸಿಟಿ ಮುಸ್ಲಿಂ ಫೋರಂ ವತಿಯಿಂದ ರಾಜ್ಯಮಟ್ಟದ ಮುಸ್ಲಿಂ ಸಮುದಾಯದ ಸಮಾವೇಶವನ್ನು ಅ.26 ರಂದು ರಾಜೀವ್‌ನಗರದ 2 ನೆ ಹಂತದ ಅಲ್‌ಬದರ್ ಮಸೀದಿ ಮುಂಭಾಗದಲ್ಲಿರುವ ಪಾಲಿಕೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಸಂಚಾಲಕ ಶಬೀರ್ ಅಹ್ಮದ್ ಖಾನ್, ಮುಸ್ಲಿಂ ಸಮುದಾಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂರನ್ನು ಸರಕಾರಗಳು ಸಂಪೂರ್ಣವಾಗಿ ಕಡೆಗಣಿಸಿವೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಕುಂದು ಕೊರತೆಗಳ ಕುರಿತು ಚರ್ಚಿಸಿ ಸಮುದಾಯದ ಬೇಡಿಕೆಗಳನ್ನು ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಮನವಿ ಸಲ್ಲಿಸುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಹಾಗೂ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿನ್ನಡೆಯನ್ನು ಅನುಭವಿಸುತ್ತಿದೆ. ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ. ಹೀಗಾಗಿ, ನಮ್ಮ ಸಮುದಾಯ ಅಭಿವೃದ್ಧಿಗಾಗಿ ಶೇ.10 ರಷ್ಟು ಮೀಸಲಾತಿ ಜಾರಿ ಮಾಡಬೇಕು. ಅದನ್ನು ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಚಿವರಾದ ಡಿ.ಕೆ.ಶಿವಕುಮಾರ್, ಮಹದೇವಪ್ಪ, ರಾಜ್ಯಸಭಾ ಸದಸ್ಯ ರೆಹಮಾನ್‌ಖಾನ್, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಸೈಯದ್ ರಹಮತ್ ಉಲ್ಲಾ, ಮುಖಂಡ ಮೌಲನಾ ಮೊಹಮ್ಮದ್ ಅನೀಫ್ ಅಪ್ಸರ್ ಅಝೀಝ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







