ದಲಿತರಿಗೆ ಮಾರಕ ಆಗಿರುವ ಕಲಂ 7‘ಡಿ’ ರದ್ದುಪಡಿಸಲು ಆಗ್ರಹ

ಬೆಂಗಳೂರು, ಅ. 22: ಪರಿಶಿಷ್ಟರ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರಕಾರ ಜಾರಿಗೆ ತಂದಿರುವ ಮಹತ್ವಕಾಂಕ್ಷೆಯ ಎಸ್ಸಿಪಿ-ಟಿಎಸ್ಪಿ ಕಾಯ್ದೆಯಲ್ಲಿನ ದಲಿತರಿಗೆ ಮಾರಕವಾಗಿರುವ ಕಲಂ 7‘ಡಿ’ಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ರವಿವಾರ ಇಲ್ಲಿನ ಶಾಸಕರ ಭವನದಲ್ಲಿ ಸಂಘದ ಅಧ್ಯಕ್ಷ ಸಂಗಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲ ಸರಕಾರಿ ಕಾಮಗಾರಿಗಳನ್ನು ಇ-ಪ್ರಕ್ಯೂರ್‌ಮೆಂಟ್ ಆಧಾರದ ಮೇಲೆ ಕರೆಯಬೇಕು. ಮ್ಯಾನ್ಯುಯಲ್ ಟೆಂಡರ್ ಆಹ್ವಾನಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾಮಗಾರಿ ಪೂರ್ಣಗೊಂಡ ಹದಿನೈದು ದಿನದ ಒಳಗೆ ಬಿಲ್ ಪಾವತಿಸಬೇಕು. ಯಾವುದೇ ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಕರೆಯಬಾರದು. 50 ಲಕ್ಷ ರೂ. ಕಾಮಗಾರಿಗೆ ಮುಂಗಡವಾಗಿ ಶೇ.25ರಷ್ಟು ಹಣವನ್ನು ಬಿಡುಗಡೆ ಮಾಡಬೇಕು. ಸಮುದಾಯದ ಗುತ್ತಿಗೆದಾರರಿಗೆ ಎಲ್ಲ ಜಿಲ್ಲೆಯಲ್ಲಿ ಕಚೇರಿ ತೆರೆಯಲು ಗುತ್ತಿಗೆ ಆಧಾರ ಮೇಲೆ ಜಾಗ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಸಮ್ಮೇಳನ: ಮಾದಿಗ ಗುತ್ತಿಗೆದಾರರ ಪತ್ತಿನ ಸಹಕಾರಿ ಸಂಘದ ಉದ್ಘಾಟನೆ ಹಾಗೂ ಮಾದಿಗ ಗುತ್ತಿಗೆದಾರರ ಸಮ್ಮೇಳನವನ್ನು ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ ಎಂದು ಸಂಗಮೇಶ್ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಶ್ರೀಕಂಠ ಬ್ರಹ್ಮಸಂದ್ರ, ಗಣೇಶ್ ಹೊರತಟ್ನಾಳ, ದೇವರಾಜ್, ರಂಗಸ್ವಾಮಿ, ಗಿರೀಶ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.







