ಆರು ಎಕರೆ ಜಾಗದಲ್ಲಿ ನಿವೇಶನ ಹಂಚಿಕೆ: ಸಚಿವ ಪ್ರಮೋದ್
ಉಡುಪಿ, ಅ.22: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಆರು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗು ವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಕೊಳಲಗಿರಿ ಸೆಕ್ರೇಡ್ ಹಾರ್ಟ್ ಚರ್ಚ್‌ನ ಸೌಹಾರ್ದ ಸಭಾಭವನದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿ ದ್ದರು. ಉಡುಪಿ ಕ್ಷೇತ್ರದಲ್ಲಿ 16 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ಒದಗಿಸಲಾಗಿದ್ದು, ರಾಜೀವ್ ಗಾಂಧಿ ವಿದ್ಯುತ್ ಯೋಜನೆಯಡಿಯಲ್ಲಿ 850 ಮನೆಗಳಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗಿದೆ. ತಾಂತ್ರಿಕ ಅಡಚಣೆ ಹೊರತುಪಡಿಸಿ ದಿನದ 24 ಗಂಟೆಯೂ ವಿದ್ಯುತ್ ಸೇವೆಯನ್ನು ನೀಡುವ ರಾಜ್ಯದ ಏಕೈಕ ಜಿಲ್ಲೆ ಉಡುಪಿ ಎಂದರು.
ಬಿಪಿಎಲ್ ಕಾರ್ಡ್ ಪಡೆಯಲು ಜನರು ಕಷ್ಟಪಡಬೇಕಾಗಿಲ್ಲ. ಆಧಾರ ಕಾರ್ಡ್ ಜೊತೆಗೆ ಅವರ ತಲಾದಾಯ 1.25ಲಕ್ಷ ರೂ., ಒಂದು ಸಾವಿರ ಸುತ್ತಳತೆಯ ಒಳಗೆ ಮನೆ ಇದ್ದರೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 3 ತಿಂಗಳೊಳಗಾಗಿ ಅಂಚೆ ಮೂಲಕ ಮನೆಯ ಬಾಗಿಲಿಗೆ ಬಿಪಿಎಲ್ ಕಾರ್ಡ್ ಬರುತ್ತದೆ ಎಂದು ಅವರು ಹೇಳಿದರು.
ಹೊಸ ಮನೆಗಳ ನಿರ್ಮಾಣಕ್ಕಾಗಿ ಎರಡು ಲಕ್ಷ ರೂ. ನೀಡಲಾಗುತ್ತಿದ್ದು, ಉದ್ಯೋಗ ಖಾತರಿ ಯೋಜನೆಯಡಿ 82 ಸಾವಿರದಷ್ಟು ಅನುದಾನ ಹೊಸ ಬಾವಿ ನಿರ್ಮಾಣಕ್ಕಾಗಿ ಒದಗಿಸಲಾಗುತ್ತಿದೆ. ದನದ ಹಟ್ಟಿ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 43 ಸಾವಿರ, ಉಳಿದ ವರಿಗೆ 23 ಸಾವಿರ ಅನುದಾನ ನೀಡಲಾಗುತ್ತಿದೆ. ತೆಂಗಿನ ತೋಟದ ಬುಡ ನಿರ್ಮಿಸುವವರಿಗೆ 50 ಸಾವಿರ ಜೊತೆಗೆ ಅಡಿಕೆ ತೋಟದ ಬುಡ ನಿರ್ಮಿಸುವ ವರಿಗೆ 1ಲಕ್ಷ 25 ಸಾವಿರ ನೀಡುವಂತ ಯೋಜನೆಗಳು ಇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್, ಧರ್ಮಗುರು ಜೊಸೆಪ್ ರೋಡ್ರಿಗಸ್, ಗ್ರಾಮಸಬೆಯ ಉಪಾಧ್ಯಕ್ಷರಾದ ಪ್ರೀತಿ ಹಾಗೂ ಮತಿತಿತರು ಉಪಸ್ಥಿತರಿದ್ದರು.