ಪ್ರಧಾನಿ , ಸಚಿವರಿಗೆ ನೇರವಾಗಿ ದೂರು ಸಲ್ಲಿಸದಿರಲು ಎಐಐಎಂಎಸ್ ಸಿಬ್ಬಂದಿಗೆ ಸೂಚನೆ

ಹೊಸದಿಲ್ಲಿ, ಅ.22: ತಮ್ಮ ದೂರು , ಕುಂದುಕೊರತೆಯ ಬಗ್ಗೆ ಅಹವಾಲನ್ನು ಪ್ರಧಾನಿ ಅಥವಾ ಸಚಿವರಿಗೆ ನೇರವಾಗಿ ಬರೆಯಬಾರದು ಎಂದು ಎಐಐಎಂಎಸ್(ಭಾರತೀಯ ವೈದ್ಯವಿಜ್ಞಾನ ಸಂಸ್ಥೆ) ಆಡಳಿತ ವರ್ಗ ಸಿಬ್ಬಂದಿಗೆ ಸೂಚಿಸಿದೆ.
ತಮ್ಮ ಯಾವುದೇ ದೂರು ದುಮ್ಮಾನಗಳಿದ್ದರೆ ಸಂಸ್ಥೆಯ ನಿರ್ದೇಶಕರಿಗೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಬೇಕು. ಅದು ಬಿಟ್ಟು, ‘ಹೊರಗಿನ ಅಧಿಕಾರಿಗಳಿಗೆ’ ನೇರವಾಗಿ ಬರೆದರೆ ಅದನ್ನು ಅನುಚಿತ ವರ್ತನೆ ಎಂದು ಪರಿಗಣಿಸಲಾಗುತ್ತದೆ ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ.
ಆಸ್ಪತ್ರೆಯಲ್ಲಿ ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದ ಹಲವಾರು ಅಹವಾಲುಗಳನ್ನು ಸಿಬ್ಬಂದಿ ನೇರವಾಗಿ ಪ್ರಧಾನಿ , ಸಚಿವರು ಅಥವಾ ಸಂಸದರಿಗೆ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಸಂಸ್ಥೆಯ ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಈ ರೀತಿ ನೇರವಾಗಿ ‘ಹೊರಗಿನ ಅಧಿಕಾರಿಗಳಿಗೆ’ ಅಹವಾಲು ಸಲ್ಲಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ರೀತಿಯ ಅಹವಾಲನ್ನು ಇ-ಮೇಲ್ ಅಥವಾ ಇನ್ನಿತರ ವಿಧದಲ್ಲಿ ಆಸ್ಪತ್ರೆಯ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸದಿದ್ದರೆ ಅದನ್ನು ಅನುಚಿತ ವರ್ತನೆ ಎಂದು ಪರಿಗಣಿಸಿ ಅಂತಹ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆಯಲ್ಲಿ ಎಚ್ಚರಿಸಲಾಗಿದೆ.





