ಬಿಜೆಪಿಯ ‘ರಾಹುಲ್ ಗಾಂಧಿ ವ್ಯಂಗ್ಯ ಚಿತ್ರ’ ದೀರ್ಘ ಕಾಲ ನಡೆಯದು: ಶಶಿ ತರೂರ್

ಹೊಸದಿಲ್ಲಿ, ಆ. 22: ಬಿಜೆಪಿ ರಾಹುಲ್ ಗಾಂಧಿ ಅವರ ವ್ಯಂಗ್ಯಚಿತ್ರವನ್ನು ಯಶಸ್ವಿಗೊಳಿಸಿದೆ. ಆದರೆ, ಈ ತಂತ್ರ ದೀರ್ಘಕಾಲ ನಡೆಯದು. ಯಾಕೆಂದರೆ, ಆಡಳಿತಾರೂಡ ಪಕ್ಷದ ಪರಿಣಾಮಕಾರಿ ಎದುರಾಳಿ ಕಾಂಗ್ರೆಸ್‌ನ ಉಪಾಧ್ಯಕ್ಷ ಎಂಬುದು ಈಗ ಜನರಿಗೆ ಅರಿವಾಗಿದೆ ಎಂದು ಮಾಜಿ ಸಚಿವ ಶಶಿ ತರೂರ್ ಹೇಳಿದ್ದಾರೆ.
ಕಳೆದ ಕೆಲವು ತಿಂಗಳಿಂದ ಬಿಜೆಪಿಯ ಈ ನಿರೂಪಣೆಗೆ ವ್ಯಕ್ತವಾಗುವ ಪ್ರತಿಕ್ರಿಯೆ ಬದಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಾಹುಲ್ ಗಾಂಧಿ ಬಗ್ಗೆ ಹೇಳುತ್ತಿರುವ ವಿಚಾರಗಳ ಬಗ್ಗೆ ಜನರು ಮುಕ್ತವಾಗಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರ ಹಾಗೂ ಕೇರಳದ ವಂಗೇರಾದಲ್ಲಿ ನಡೆದ ಉಪಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಜಯ ಗಳಿಸಿರುವುದು ಬಿಜೆಪಿ ಬಗ್ಗೆ ಜನರ ನಿಲುವು ಬದಲಾವಣೆ ಆಗಿರುವುದರ ಸಂಕೇತ ಎಂದು ತರೂರ್ ಹೇಳಿದರು.
ರಾಹುಲ್ ಗಾಂಧಿ ಅವರು ಶೀಘ್ರ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ನಿರೀಕ್ಷೆಯಲ್ಲಿರುವಾಗ ತರೂರ್ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. ಇದು ಇತ್ತೀಚಿನ ಉಪ ಚುನಾವಣೆಯಲ್ಲಿ ಬಹಿರಂಗಗೊಂಡಿದೆ.
ಶಶಿ ತರೂರ್, ಕಾಂಗ್ರೆಸ್ ಸಂಸದ.







