ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ ಮೂಡಿಸಿದರೆ ಭಾಷೆಯ ಉಳಿವಿಗೆ ಪೂರಕ: ಚಿಕ್ಕಸ್ವಾಮಿ

ನಾಗಮಂಗಲ, ಅ.22: ಪ್ರಾಥಮಿಕ ಮತ್ತು ಪ್ರೌಢಾಶಾಲಾವಸ್ಥೆಯಲ್ಲಿಯೇ ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ ಮೂಡಿಸುವುದು ಭಾಷೆಯ ಉಳಿವಿಗೆ ಪೂರಕ ಎಂದು ಮಂಡ್ಯ ಜಿಲ್ಲಾ ವಚನ ಸಾಹಿತ್ಯ ಸಮಿತಿ ಅಧ್ಯಕ್ಷ ಚಿಕ್ಕಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಭವನದಲ್ಲಿ ನಡೆದ ಮಕ್ಕಳ ಸಾಹಿತ್ಯ ಪರಿಷತ್‍ನ ತಾಲೂಕು ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಜ್ಞಾನದ ಕಣಜದಲ್ಲಿ ಅಡಕವಾಗುವ ವೈವಿಧ್ಯ ರೂಪದ ಅಂಶಗಳು, ಅಕ್ಷರ ರೂಪದಲ್ಲಿ ದಾಖಲಿಸುವ ಮನೋಭಾವ ಮಕ್ಕಳಲ್ಲಿ ರೂಢಿತವಾಗಬೇಕು. ಮಕ್ಕಳಲ್ಲಿನ ಇಚ್ಛಾಸಕ್ತಿಯಿಂದ ಬರಹದಂತಹ ಕ್ರಿಯಾಸಕ್ತಿ, ಭವಿಷ್ಯದ ದಿನಮಾನದಲ್ಲಿ ಕವಿ, ಸಾಹಿತಿ, ವಿಮರ್ಶಕ ಹಾಗೂ ಚಿಂತಕರಾಗಲು ಕಾರಣವಾಗುತ್ತದೆ ಎಂದು ಹೇಳಿದರು.
ಮಕ್ಕಳಲ್ಲಿನ ಭಾವನೆಗಳು ಬರಹದ ರೂಪ ತಾಳಲು ಪೋಷಕರ ಮತ್ತು ಸಾಹಿತ್ಯಾಸಕ್ತರ ಪ್ರೋತ್ಸಾಹ ಸಹಕಾರಿಯಾಗಲಿದೆ. ಬರೆಯುವ ಹವ್ಯಾಸವುಳ್ಳ ಮಕ್ಕಳಿಗೆ, ಕ್ರಮಬದ್ಧ ಓದಿನ ಮೂಲಕ ನೈಜತೆಯನ್ನು ಅರ್ಥೈಸಿಕೊಳ್ಳುವ ಮನೋಭಾವ ವೃದ್ಧಿಸುತ್ತದೆ ಎಂದು ವಿಶ್ಲೇಷಿಸಿದರು.
ಈ ವೇಳೆ ಶಿಕ್ಷಣ ಸಂಯೋಜಕ ಎನ್.ಸಿ.ಶಿವಕುಮಾರ್‍ರವರಿಗೆ ತಾಲೂಕು ಘಟಕದ ಅಧ್ಯಕ್ಷ ಪದವಿಯ ಅಧಿಕಾರವನ್ನು ಪ್ರಮಾಣ ಪತ್ರ ನೀಡುವ ಮೂಲಕ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಹರೀಶ್ ಭಟ್, ಪ್ರಾಂಶುಪಾಲ ಚಂದ್ರಶೇಖರ್, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಎನ್.ಮಂಜುನಾಥ್, ತಾಲೂಕು ಘಟಕದ ಖಜಾಂಚಿ ನಂಜರಾಜ್ ಹಾಗೂ ಸಿದ್ದಾರ್ಥ ಪೈ ಉಪಸ್ಥಿತರಿದ್ದರು.







