ಹೇರಲ್ಪಟ್ಟಿರುವ ಕಟ್ಟುಪಾಡುಗಳಿಂದ ಮಹಿಳೆಯರು ಹೊರಬರಬೇಕು: ರೂಪಾ

ದಾವಣಗೆರೆ, ಅ.22: ಹೇರಲ್ಪಟ್ಟಿರುವ ಕಟ್ಟುಪಾಡುಗಳಿಂದ ಮಹಿಳೆಯರು ಹೊರಬರಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಡಿ. ರೂಪಾ ಕರೆ ನೀಡಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಕಷ್ಟ ಅರಿಯಲು ಇನ್ನೊಂದು ಮಹಿಳೆಯಿಂದ ಮಾತ್ರ ಸಾಧ್ಯ. ಆದ್ದರಿಂದ ಮಹಿಳೆಯರು ಹೆಚ್ಚಾಗಿ ಸಾಹಿತ್ಯ, ಕೃಷಿಯಲ್ಲಿ ತೊಡಗಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಇಂಥಹದ್ದೇ ಮಾಡಬೇಕೆಂಬ ಕಟ್ಟುಪಾಡುಗಳಿದ್ದು, ಇವು ಬದಲಾಗಬೇಕೆಂದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಬೇಕು ಎಂದರು.
ಸಾಹಿತ್ಯ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಇಲ್ಲಿಯ ವರೆಗೂ ಕೇವಲ 8ರಿಂದ 10 ಮಹಿಳಾ ಸಾಧಕೀಯರ ಹೆಸರು ಮಾತ್ರ ಕೇಳಿ ಬರುತ್ತಿದೆ. ಕನ್ನಡಕ್ಕೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದ್ದರೂ, ಈವರೆಗೂ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ. ಇನ್ನೂ ಮುಂದಾದರೂ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬರಲಿ ಎಂದು ಆಶಿಸಿದರು.
ಕೃತಿಗಳನ್ನು ಲೋಕಾರ್ಪಣೆ ಮಾಡಿದ ಪ್ರಭಾ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಿದೆ. ಶೈಕ್ಷಣಿಕ ಪಠ್ಯದ ಜೊತೆಗೆ ಅಟೋ ಬಯೋಗ್ರಫಿ, ಕೆಲ ವ್ಯಕ್ತಿಗಳ ಯಶೋಗಾಥೆಗಳನ್ನು ಮಕ್ಕಳಿಂದ ಓದಿಸಬೇಕು. ಪುಸ್ತಕಗಳ ಜತೆ ಸಮಯ ಕಳೆದರೆ ಧ್ಯಾನ ಮಾಡುವ ಅನುಭವ ವ್ಯಕ್ತವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ್ ಕುರ್ಕಿ, ಹಿರಿಯ ಸಾಹಿತಿ ಡಾ. ಎಚ್. ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಎಸ್ಪಿ ಡಾ. ಭೀಮಾಶಂಕರ್ ಎಸ್. ಗುಳೇದ್, ಶಾಂತಕುಮಾರಿ, ಕಿರುವಾಡಿ ಗಿರಿಜಮ್ಮ ಮತ್ತಿತರರಿದ್ದರು.







