ರಾಜ್ಯ ಸರಕಾರ ದಲಿತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ: ಡಾ.ರಫೀಕ್ ಅಹ್ಮದ್

ತುಮಕೂರು, ಅ.22: ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಮತ್ತು ಬಾಬು ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ದಲಿತ ಮುಖಂಡರ ಜೊತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಶಾಸಕ ಡಾ.ರಫೀಕ್ ಅಹ್ಮದ್ ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ.ಬಿ.ಆರ್. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜನ್ಮ ಜಯಂತಿ ಹಾಗೂ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಈ ಹಿಂದೆ ಸುರೇಶ್‍ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ನಗರಪಾಲಿಕೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಂ ಪುತ್ಥಳಿ ಅನಾವರಣಕ್ಕೆ ಶಂಕುಸ್ಥಾಪನೆ ನರವೇರಿಸಿದ್ದರು. ಆದರೆ ಆ ನಂತರದಲ್ಲಿ ಬಂದ ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ಪುತ್ಥಳಿ ಅನಾವರಣೆ ವಿಚಾರ ನೆನೆಗುದ್ದಿಗೆ ಬಿದ್ದಿದೆ. ಬಾಬಾ ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ಈ ಹಿಂದೆ ಎಸ್ ಎಸ್ ಐಟಿ ಕಾಲೇಜಿನ ಬಳಿ ಜಾಗ ಗುರುತಿಸಿದ್ದು, ಅದು ಅತ್ಯಂತ ಚಿಕ್ಕ ಜಾಗವಾದ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಸಿದ್ಧ ವಿನಾಯಕ ಮಾರುಕಟ್ಟೆ ಜಾಗದಲ್ಲಿ ಮಾಡಲು ಉದ್ದೇಶಿಸಿ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಜಾಗ ನಮ್ಮ ಕೈ ಸೇರುತ್ತಿಲ್ಲ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚೆ ನಡೆಸುವುದಲ್ಲದೆ, ಮಧುಗಿರಿ ಮಾದರಿಯಲ್ಲಿಯೇ ತುಮಕೂರು ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ಆನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಸರಕಾರದ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಯಸಿದ್ದ ಸಮ ಸಮಾಜ ನಿರ್ಮಾಣದ ಕಡೆಗೆ ಹೆಚ್ಚು ಒತ್ತು ನೀಡುತ್ತಿದೆ. ದಲಿತ ಕಾಲನಿಗಳಿಗೆ ಮೂಲಭೂತ ಸೌಕರ್ಯದ ಜೊತೆಗೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ತೆರೆಯುವ ಮೂಲಕ ಉತ್ತಮ ಅವಕಾಶ ಒದಗಿಸಿದೆ ಎಂದು ತಿಳಿಸಿದರು.
ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಗೋವಿಂದರಾಯ ಮಾತನಾಡಿ, ಅಂಬೇಡ್ಕರ್ ಹೆಸರನ್ನು ವಿವಿಧ ಬೀದಿಗಳಿಡುವುದಕ್ಕಿಂತ, ಅವರಂತೆ ಇತರರಿಗೆ ಬೆಳಕಾಗಿ ಬಾಳುವುದು ಮುಖ್ಯ. ಇಂದು ನಮ್ಮನ್ನು ಅಂಬೇಡ್ಕರ್ ಬರೆದ ಲಿಖಿತ ಸಂವಿಧಾನಕ್ಕಿಂತ ಮೇಲ್ವರ್ಗಗಳು ಅನುಸರಿಸಿಕೊಂಡು ಬಂದಿರುವ ಅಲಿಖಿತ ಸಂವಿಧಾನಗಳು ಆಳುತ್ತಿವೆ. ದೇಶದಲ್ಲಿ ಇಂದಿಗೂ ಅಸಮಾನತೆ, ಅಸ್ಪೃಶ್ಯತೆ ಆಚರಣೆಯಲ್ಲಿರುವ ಇಂತಹ ಅಲಿಖಿತ ಸಂವಿಧಾನಗಳೇ ಕಾರಣ. ಇದರ ವಿರುದ್ಧ ದಲಿತ ಯುವಕರು ಎಚ್ಚೆತ್ತುಕೊಂಡು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿ, ಪರಿವರ್ತನೆಯ ಕಡೆಗೆ ಸಮುದಾಯವನ್ನು ತೆಗೆದುಕೊಂಡು ಹೋಗಬೇಕು ಎಂದು ಕರೆ ನೀಡಿದರು.
ತಾಲೂಕು ಪಂಚಾಯತ್ ಇಒ ಡಾ.ಕೆ.ನಾಗಣ್ಣ ಮಾತನಾಡಿ, ದೇಶದಲ್ಲಿ ಎಲ್ಲರೂ ಸಮಾನರು ಎಂಬ ಮನೋಭಾವನೆ ಉಂಟಾಗದೆ ಅಸ್ಪೃಶ್ಯತೆಯನ್ನು ತೊಲಗಿಸಲು ಸಾಧ್ಯವಿಲ್ಲ. ಸಂಘಟನೆಗಳು ಒಲೈಕೆಯ ರಾಜಕಾರಣ ಬಿಟ್ಟು, ಸಮುದಾಯದ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿಯಬೇಕೆಂದು ಸಲಹೆ ನೀಡಿದರು.
ಈ ವೇಳೆ ವಿವಿಧ ಸರಕಾರದ ವಿವಿಧ ಸಮಿತಿಗಳಿಗೆ ಸದಸ್ಯರಾಗಿ ನೇಮಕಗೊಂಡಿರುವ ಶಾಂತರಾಜು, ಭಾನುಪ್ರಕಾಶ್, ಹೆಗ್ಗರೆ ಕೃಷ್ಣಪ್ಪ,ಶಿವಾಜಿ, ಗುರುಪ್ರಸಾದ್, ರಾಘವೇಂದ್ರ ಸ್ವಾಮಿ, ದಲಿತ ಮುಖಂಡರಾದ ಬಿ.ಜಿ.ಲಿಂಗರಾಜು, ಗೌತಮ್, ಸತ್ಯ ಸಮಾಧಾನ ಟಿ.ಎ, ಕೇಬಲ್ ರಘು, ಕೆಂಪರಾಜು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಸನ್ ಡಯಟ್‍ನ ಉಪನ್ಯಾಸಕ ಪಿ.ಬಿ.ಬಸವರಾಜು, ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ವೀರಭದ್ರಯ್ಯ, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು, ತುಮಕೂರು ತಾಲೂಕು ಪಂಚಾಯತ್ ಅಧ್ಯಕ್ಷ ಗಂಗಾಂಜನೇಯ ಮಾತನಾಡಿದರು. ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿ.ಆರ್, ಅಖಿಲಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಸೋಮಶೇಖರ್, ಎನ್.ಬಿ. ಪ್ರಧಾನ ಕಾರ್ಯದರ್ಶಿ ಸುರೇಶ್ ಜಿ.ಆರ್., ಸದಸ್ಯರಾದ ಮಾರುತಿ ಪ್ರಸಾದ್, ಜಿ.ಎಸ್.ಮಂಜುನಾಥ್, ಗೋವಿಂದರಾಜು.ಕೆ. ಮತ್ತಿತರರು ಉಪಸ್ಥಿತರಿದ್ದರು.







