ಅಪಾಯಕಾರಿ ‘ಮಧುಮೇಹ ರೆಟಿನೋಪತಿ’ ಬಗ್ಗೆ ನಿಮಗೆ ಗೊತ್ತೇ?
ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆರೋಗ್ಯದ ಬಗ್ಗೆ ತುಂಬ ಕಾಳಜಿ ವಹಿಸಬೇಕಾಗುತ್ತದೆ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆ ಕೂಡ ಮಧುಮೇಹಿಗಳ ಪಾಲಿಗೆ ದೊಡ್ಡದಾಗಿ ಕಾಡಬಹುದು. ಮಧುಮೇಹದ ಮೇಲೆ ನಿಯಂತ್ರಣವಿಲ್ಲದಿದ್ದರೆ ಅದು ಕಣ್ಣಿಗೂ ಆಪತ್ತನ್ನು ತರಬಹುದು. ‘ಮಧುಮೇಹ ರೆಟಿನೋಪತಿ’ ಹೆಸರೇ ಸೂಚಿಸುವಂತೆ ಮಧುಮೇಹಿಗಳ ಪಾಲಿಗೆ ತುಂಬ ಅಪಾಯಕಾರಿಯಾಗಿದೆ. ಹೆಚ್ಚಿನವರಿಗೆ ಇಂತಹುದೊಂದು ರೋಗವಿದೆ ಎನ್ನುವುದೂ ಗೊತ್ತಿಲ್ಲ.
ಅಂದ ಹಾಗೆ ಮಧುಮೇಹ ರೆಟಿನೋಪತಿ ದಿಢೀರ್ನೆ ಬರುವ ರೋಗವಲ್ಲ. ಕಾಲಕ್ರಮೇಣ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾದಾಗ ಅದು ಕಣ್ಣಿನ ರೆಟಿನಾ ಅಥವಾ ಅಕ್ಷಿಪಟಲ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ, ಪರಿಣಾಮವಾಗಿ ಅಂಧತ್ವವುಂಟಾಗುತ್ತದೆ. ಹೀಗಾಗಿ ನೀವು ಮಧುಮೇಹಿಗಳಾಗಿದ್ದಲ್ಲಿ ಇದರ ಬಗ್ಗೆ ಮಾಹಿತಿಗಳನ್ನು ಅಗತ್ಯವಾಗಿ ತಿಳಿದುಕೊಳ್ಳಲೇಬೇಕು.
ಮಧುಮೇಹ ರೆಟಿನೋಪತಿ ಟೈಪ್ 1 ಮತ್ತು ಟೈಪ್ 2 ಹೀಗೆ ಎರಡೂ ಹಂತಗಳ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಧುಮೇಹ ರೆಟಿನೋಪತಿಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳು ಇಲ್ಲಿವೆ.
ಈಗ ತಾನೇ ಮಧುಮೇಹ ಪತ್ತೆಯಾಗಿರುವವರಿಗಿಂತ ಸುದೀರ್ಘ ಕಾಲದಿಂದ ಮಧುಮೇಹದಿಂದ ಬಳಲುತ್ತಿರುವವರು ಈ ರೋಗಕ್ಕೆ ಗುರಿಯಾಗುವ ಅಪಾಯ ಹೆಚ್ಚು.
ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಬಗ್ಗೆ ಎಚ್ಚರಿಕೆ ವಹಿಸದಿರುವವರು ಮಧುಮೇಹ ರೆಟಿನೋಪತಿ ಸೇರಿದಂತೆ ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಿಲುಕುವ ಹೆಚ್ಚಿನ ಅಪಾಯದಲ್ಲಿರುತ್ತಾರೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ರಕ್ತನಾಳಗಳಿಗೆ ರಕ್ತದ ಹರಿವನ್ನು ಹೆಚ್ಚು ಸಮಯ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದ ಅಂತಹವರು ಮಧುಮೇಹ ರೆಟಿನೋಪತಿ ಸೇರಿದಂತೆ ಅಪಧಮನಿಯ ಸಮಸ್ಯೆಗಳಿಗೆ ಗುರಿಯಾಗು ತ್ತಾರೆ.
ನಮ್ಮ ಶರೀರದಲ್ಲಿ ಸಂಗ್ರಹವಾಗುವ ಕೊಲೆಸ್ಟ್ರಾಲ್ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ತಡೆಯುಂಟು ಮಾಡುವುದು ಮಾತ್ರವಲ್ಲ, ಅವು ಕಣ್ಣು ಸೇರಿದಂತೆ ಶರೀರದ ಇತರ ಭಾಗಗಳಲ್ಲಿಯ ಅಪಧಮನಿಗಳನ್ನೂ ಮುಚ್ಚಬಹುದು. ಗರ್ಭಾವಸ್ಥೆ ಮಹಿಳೆಯ ಜೀವನದಲ್ಲಿ ಅತ್ಯಂತ ಮುಖ್ಯವಾದ ಹಂತವಾಗಿದೆ. ಆದರೆ ಗರ್ಭಿಣಿಯರು ಮಧುಮೇಹಕ್ಕೆ ಗುರಿಯಾಗುವ ಅಪಾಯವೂ ಇದೆ.
ತಂಬಾಕು ಬಳಕೆಯು ಎಂಡಾರ್ಟ್ರಿಟಿಸ್ಗೆ ಕಾರಣವಾಗುತ್ತದೆ. ಇದು ಲೋಮನಾಳ ಗಳು ಸಂಕುಚಿತಗೊಳ್ಳುವಂತೆ ಮಾಡುತ್ತದೆ ಮತ್ತು ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ರಕ್ತ ಪೂರೈಕೆಯನ್ನು ಕಡಿತಗೊಳಿಸುತ್ತದೆ.
ಲಕ್ಷಣಗಳು: ಮಧುಮೇಹ ರೆಟಿನೋಪತಿಯು ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಅದು ತೀವ್ರಗೊಂಡಾಗಲೇ ರೋಗವಿರುವುದು ಪತ್ತೆ ಯಾಗುತ್ತದೆ.
ಮಂದ ದೃಷ್ಟಿ, ದೃಷ್ಟಿಕ್ಷೇತ್ರದಲ್ಲಿ ಏರಿಳಿತಗಳು, ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುವುದರಿಂದ ದೃಷ್ಟಿಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಕಡುಕಪ್ಪು ಕಲೆಗಳು, ವರ್ಣಾಂಧತೆ ಮತ್ತು ದೃಷ್ಟಿದೋಷ ಇವು ಮಧುಮೇಹ ರೆಟಿನೋಪತಿಯನ್ನು ಸೂಚಿಸುತ್ತವೆ.
ಮಧುಮೇಹಿಗಳು ವರ್ಷಕ್ಕೊಮ್ಮೆಯಾದರೂ ತಜ್ಞ ನೇತ್ರವೈದ್ಯರಿಂದ ತಮ್ಮ ಕಣ್ಣುಗಳ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಮಧುಮೇಹ ರೆಟಿನೋಪತಿಯ ವಿಷಯದಲ್ಲಿ ಹೇಳುವುದಾದರೆ ನೀವು ಅಂಧರಾಗದಂತೆ ತಡೆಯುವುದು ಹೇಗೆ ಎನ್ನುವುದು ಅವರಿಗೆ ಮಾತ್ರ ತಿಳಿದಿರುತ್ತದೆ.