ಅಕ್ರಮ ಮರಳು ಸಾಗಾಟ ತಡೆಗಟ್ಟಲು ಒತ್ತಾಯಿಸಿ ಧರಣಿ

ಮಂಗಳೂರು, ಅ.23: ಕರಾವಳಿ ಜಿಲ್ಲೆಗಳಲ್ಲಿ ಶಾಶ್ವತ ಹಾಗೂ ಜನಪರ ಮರಳು ನೀತಿಯನ್ನು ಜಾರಿಗೊಳಿಸಲು ಆಗ್ರಹಿಸಿ ಮತ್ತು ಅಕ್ರಮ ಮರಳು ಸಾಗಾಟವನ್ನು ತಡೆಗಟ್ಟಬೇಕು ಹಾಗೂ ಉಸ್ತುವಾರಿ ಸಚಿವರ ಸಮಕ್ಷಮದಲ್ಲಿ ಜಿಲ್ಲಾಡಳಿತ ಸಭೆ ಕರೆಯಬೇಕು ಎಂದು ಒತ್ತಾಸಿ ಸಿಐಟಿಯು ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ದ.ಕ. ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಸೋಮವಾರ ಧರಣಿ ನಡೆಸಿದರು.
300ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಮರಳಿನ ಕೃತಕ ಅಭಾವ ಸೃಷ್ಟಿಸಿದ ಜಿಲ್ಲಾಡಳಿತಕ್ಕೆ ಧಿಕ್ಕಾರ, ಮರಳು ಮಾಫಿಯಾವನ್ನು ಮಟ್ಟ ಹಾಕಿರಿ, ಜನಪರ ಮರಳು ನೀತಿ ಜಾರಿಗೊಳಿಸಿ ಇತ್ಯಾದಿ ಘೋಷಣೆ ಕೂಗಿದರು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಸುನೀಲ್‌ಕುಮಾರ್ ಬಜಾಲ್ ಕರಾವಳಿಯಲ್ಲಿ ನೈಸರ್ಗಿಕವಾಗಿ ಅಪಾರವಾದ ಮರಳು ಲಭ್ಯವಿದ್ದರೂ ಜಿಲ್ಲೆಯ ಜನರಿಗೆ ಸಿಗದಿರುವುದು ವಿಪರ್ಯಾಸವಾಗಿದೆ. ಇದರಿಂದ ಕಟ್ಟಡ ನಿರ್ಮಾಣ ರಂಗದಲ್ಲಿ ದುಡಿಯುವ ಕಾರ್ಮಿಕರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಜಿಲ್ಲೆಯ ನದಿಗಳಲ್ಲಿ ಉತ್ತಮ ಗುಣಮಟ್ಟದ ಮರಳು ವಿಫುಲವಾಗಿ ಸಿಗುತ್ತಿದ್ದರೂ ರಾಜ್ಯ ಸರಕಾರದ ತಪ್ಪುನೀತಿಗಳಿಂದಾಗಿ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಕೆ.ಪಿ. ಜೋನಿ, ಜಯಂತ ನಾಯ್ಕ, ಸಿಐಟಿಯು ಜಿಲ್ಲಾ ನಾಯಕರಾದ ಸದಾಶಿವದಾಸ್, ಕೃಷ್ಣಪ್ಪ ಸಾಲ್ಯಾನ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ, ಜನಾರ್ದನ ಕುತ್ತಾರ್, ಸಂತೋಷ್ ಶಕ್ತಿನಗರ, ವಸಂತಿ ಕುಪ್ಪೆಪದವು, ಜಯಶೀಲಾ, ಶಂಕರ್ ಮೂಡುಬಿದಿರೆ, ಶಿವರಾಮ ಗೌಡ, ಚಂದ್ರಹಾಸ ಪಿಲಾರು, ಪ್ರೇಮನಾಥ ಜಲ್ಲಿಗುಡ್ಡೆ, ರೋಹಿದಾಸ್, ಅಶೋಕ್ ಶ್ರೀಯಾನ್, ಅನಿಲ್, ಚಂದ್ರಶೇಖರ್ ಪಾಲ್ಗೊಂಡಿದ್ದರು.







