ಶಕ್ತಿನಗರ ಕಾರ್ಮಿಕ ಕಾಲನಿಯಲ್ಲಿ ಜನಸಂಪರ್ಕ ಸಭೆ
ಮಂಗಳೂರು, ಅ.23: ನಗರದ ಶಕ್ತಿನಗರ ಕಾರ್ಮಿಕ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ಜನಸಂಪರ್ಕ ಸಭೆಯು ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರು ಹಕ್ಕುಪತ್ರ, 94 ಸಿಸಿ, ಪಹಣಿಪತ್ರ ಇತ್ಯಾದಿ ಸಮಸ್ಯೆಗಳನ್ನು ಮುಂದಿಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್.ಲೊಬೊ ಇಷ್ಟು ವರ್ಷಗಳಿಂದ ಜನವಾಸವಿದ್ದರೂ ಹಕ್ಕುಪತ್ರ ಕೊಡಲಾಗದಿರುವ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ ಈ ಕಾಲನಿಯ ಜನರಿಗೆ ಹಕ್ಕುಪತ್ರ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಹಕ್ಕುಪತ್ರ ಸಿಕ್ಕಿಯೂ ಎನ್‌ಒಸಿ ಸಿಗದಿರುವುದು, ಹಕ್ಕುಪತ್ರವಿದ್ದೂ ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವ ಬಗ್ಗೆ ಚರ್ಚಿಸಲು ಅ.30ರಂದು ಅಧಿಕಾರಿಗಳು ವಿಶೇಷ ಸಭೆ ನಡೆಸಲಿದ್ದಾರೆ. ಸುಮಾರು 25 ವರ್ಷಗಳಿಂದ ಪರಿಹಾರ ಸಿಗದಿರುವ ಸಮಸ್ಯೆಗಳಿಗೆ ಈ ಸಭೆಯಲ್ಲಿ ಪರಿಹಾರ ಕೊಡಲಿದ್ದಾರೆ ಎಂದು ಜೆ.ಆರ್.ಲೋಬೊ ಹೇಳಿದರು.
ಸಭೆಯಲ್ಲಿ ಕಾರ್ಪೊರೇಟರ್ ಝುಬೇದಾ ಅಝೀಝ್, ಮಾಜಿ ಮೇಯರ್ ಅಬ್ದುಲ್ ಅಝೀಝ್, ಮರಿಯಮ್ಮ ಥಾಮಸ್, ತಹಶೀಲ್ದಾರ್ ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.





