ಸಯನೇಡ್ ಮೋಹನ್ ಗಲ್ಲು ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಅ.24ಕ್ಕೆ ಮುಂದೂಡಿದ ಹೈಕೋರ್ಟ್
ದಕ್ಷಿಣ ಕನ್ನಡ ಜಿಲ್ಲೆಯ ಲೀಲಾವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ
ಬೆಂಗಳೂರು, ಅ.23: ದಕ್ಷಿಣ ಕನ್ನಡ ಜಿಲ್ಲೆಯ ಲೀಲಾವತಿ ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದುಕೋರಿ ಸಯನೇಡ್ ಮೋಹನ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.24ಕ್ಕೆ ಮುಂದೂಡಿದೆ.
ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಕೋರಿ ಮೋಹನ್‌ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ ಈ ಶಿಕ್ಷೆಯನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಅ.24 ಕ್ಕೆ ವಿಚಾರಣೆಯನ್ನು ಮುಂದೂಡಿತು.
ಅಪರಾಧಿ ಮೋಹನ್‌ಕುಮಾರ್ ಖುದ್ದು ವಾದ ಮಂಡಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಲೀಲಾವತಿ ಅವರನ್ನು ಅತ್ಯಾಚಾರಗೈದು ಸಯನೇಡ್ ತಿನ್ನಿಸಿ ಕೊಲೆ ಮಾಡಿಲ್ಲ. ಆದರೂ ಪೊಲೀಸರು ಲೀಲಾವತಿ ಅವರನ್ನು ಸಯನೇಡ್ ತಿನ್ನಿಸಿ ಸಾಯಿಸಿದ್ದಾರೆ ಎಂದು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅಲ್ಲದೆ, ಲೀಲಾವತಿಯ ಮೈಮೇಲೆ ಇದ್ದ ಯಾವ ಚಿನ್ನಾಭರಣವನ್ನು ದೋಚಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ನನಗೆ ಯಾರೂ ಸಯನೇಡ್ ನೀಡಿಲ್ಲ. ಮೋಹನ್‌ಗೆ ಸಯನೇಡ್ ನೀಡಿದ್ದಾನೆ ಎಂದು ಹೆಸರಿಸುವ ವ್ಯಕ್ತಿಯೂ ತಮಗೆ ಮೋಹನ್ ಯಾರೂ ಅಂತಲೇ ಗೊತ್ತಿಲ್ಲ ಎಂದು ಹೇಳುತ್ತಾನೆ. ಆದರೂ ಪೊಲೀಸರು ಲೀಲಾವತಿಯನ್ನು ಸಯನೇಡ್ ತಿನ್ನಿಸಿ ಕೊಲೆ ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ನ್ಯಾಯಮೂರ್ತಿ ಕುನ್ಹ ಅವರು, ನಿನಗೆ ಎಷ್ಟು ಮಂದಿ ಹೆಂಡತಿಯರು ಎಂದು ಪ್ರಶ್ನಿಸಿದರು. ಇದಕ್ಕೆ ತಡಬಡಿಸುತ್ತಾ ಮೋಹನ್‌ಕುಮಾರ ಸಣ್ಣ ದನಿಯಲ್ಲಿ, ಇಬ್ಬರು ಎಂದ. ಆಗ ಮಧ್ಯ ಪ್ರವೇಶಿಸಿದ ರಾಜ್ಯ ಪ್ರಾಸಿಕ್ಯೂಷನ್ ವಕೀಲ ವಿಜಯಕುಮಾರ್ ಮಜಗೆ, ಇಲ್ಲಾ ಸ್ವಾಮಿ ಈತನಿಗೆ ಮೂವರು ಹೆಂಡತಿಯರು. ಅವರಲ್ಲಿ ಮೊದಲನೆಯ ಹೆಂಡತಿ ವಿಚ್ಛೇದನ ಪಡೆದಿದ್ದಾರೆ ಎಂದರು.
ಆಗ ಮಳಿಮಠ ಅವರು, ಅಲ್ಲಯ್ಯ ನಿನ್ನ ಹೆಂಡತಿಯ ಚಿನ್ನಾಭರಣ ಎನ್ನುತ್ತೀಯಾ. ಅವಳು ಏಕೆ ಚಿನ್ನಾಭರಣ ಕೇಳಲು ಬಂದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಮೋಹನಕುಮಾರ್, ಸ್ವಾಮಿ ಅವಳಿಗೆ ಭಯ ಎಂದ. ಆಗ ಮಳಿಮಠ ಅವರು ಹೆಂಡತಿಗೆ ಯಾರ ಭಯವೂ ಇರಲ್ಲರೀ ಎಂದರು. ನಾಳೆಗೆ ವಿಚಾರಣೆ ಮುಂದೂಡಲಾಗಿದೆ.







