ವಕೀಲರ ಮನವಿ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ನ್ಯಾಯಾಲಯದ ಬಳಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಪ್ರಶ್ನಿಸಿ ಅರ್ಜಿ ಸಲ್ಲಿಕೆ
ಬೆಂಗಳೂರು, ಅ.23: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನ್ಯಾಯಾಲಯದ ಸಂಕೀರ್ಣಕ್ಕೆ ಹೊಂದಿಕೊಂಡಂತೆ ಉದ್ದೇಶಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮಾಡದಂತೆ ಕೋರಿ ಹೊಳಲ್ಕೆರೆ ವಕೀಲರ ಸಂಘ ಸಲ್ಲಿಸಿರುವ ಮನವಿ ಪತ್ರ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಈ ಸಂಬಂಧ ಹೊಳಲ್ಕೆರೆ ವಕೀಲರ ಸಂಘ ಪಿಐಎಲ್ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ಮನವಿ ಪರಿಶೀಲಿಸಿ ನ್ಯಾಯಾಲಯದ ಸಂಕೀರ್ಣ ಪಕ್ಕದಲ್ಲೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಿಸುವುದು ಸರಿಯೋ ಅಥವಾ ಇಲ್ಲವೊ ಎಂಬುದನ್ನು ತೀರ್ಮಾನಿಸಿ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ಅರ್ಜಿಯನ್ನು ಇತ್ಯರ್ಥ ಪಡಿಸಿತು.
ಸಂಘದ ಪರ ವಕೀಲ ಬಿ.ಎಂ. ಸಿದ್ದಪ್ಪ ವಾದಿಸಿ, ಹೊಳಲ್ಕೆರೆಯ ನ್ಯಾಯಾಲಯದ ಸಂಕೀರ್ಣದ ಪಕ್ಕದಲ್ಲಿ ಅರಣ್ಯ ಇಲಾಖೆಗೆ ಸೇರಿದ 1 ಎಕರೆ 6 ಗುಂಟೆ ಜಾಗವಿದ್ದು, ಅಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಅದರಂತೆ ಸದರಿ ಜಾಗವನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕಾರ್ಯುದರ್ಶಿ ಆದೇಶ ಮಾಡಿದ್ದಾರೆ. ಒಂದೊಮ್ಮೆ ಈ ಸ್ಥಳದಲ್ಲಿ ಬಸ್ ನಿಲ್ದಾಣ ಮಾಡಿದರೆ, ವಾಹನ ದಟ್ಟಣೆ ಏರ್ಪಟ್ಟು ಶಬ್ದ ಹಾಗೂ ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಸುಗಮವಾಗಿ ಕೋರ್ಟ್ ಕಲಾಪ ನಡೆಸುವುದಕ್ಕೆ ಅಡಚಣೆಯಾಗಲಿದೆ. ಹೀಗಾಗಿ, ಬಸ್ ನಿಲ್ದಾಣ ನಿರ್ಮಿಸದಂತೆ ಕೋರಿ ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿಪತ್ರ ನೀಡಿದ್ದು, ಅದನ್ನು ಈವರೆಗೆ ಪರಿಗಣಿಸಿಲ್ಲ ಎಂದು ದೂರಿದರು. ಈ ವಾದ ಆಲಿಸಿದ ನ್ಯಾಯಪೀಠ ಮೇಲಿನಂತೆ ನಿರ್ದೇಶಿಸಿತು.







