ಮಡಿಕೇರಿ : ವೀರ ವನಿತೆ ಕಿತ್ತೂರು ರಾಣಿ ಜಯಂತ್ಯುತ್ಸವ

ಮಡಿಕೇರಿ, ಅ.23:ನಾಡಿನ ವೀರ ವನಿತೆ, ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಜನಮನಕ್ಕೆ ಪಾತ್ರರಾದರು ಕಿತ್ತೂರು ರಾಣಿ ಚೆನ್ನಮ್ಮ ಎಂದು ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಬ್ರಿಟಿಷರ ತೆರಿಗೆ ಸಂಗ್ರಹ ಪದ್ಧತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ವಿರೋಧಿಸಿ ದಿಟ್ಟತನ ಪ್ರದರ್ಶಿಸಿದ ವೀರ ಮಹಿಳೆ ಎಂದು ಅವರು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಸರ್ಕಾರ ಮಹಿಳೆಯರಿಗೆ ಶೌರ್ಯ ಪ್ರಶಸ್ತಿಯನ್ನು ನೀಡುತ್ತಿದ್ದು, ಶೌರ್ಯ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಮಹಿಳೆಯರು ಮಹತ್ತರ ಸಾಧನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದು ಕಾವೇರಮ್ಮ ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶ ಪ್ರೇಮ ಸ್ಮರಿಸುವಂತಾಗಬೇಕು. ಕಿತ್ತೂರು ರಾಣಿ ಚೆನ್ನಮ್ಮ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು.
ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸಿದ್ದರಾಜು ಅವರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪ್ರಥಮ ಹೋರಾಟಗಾರ್ತಿ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ರಾಷ್ಟ್ರಭಿಮಾನದಲ್ಲಿ ತೊಡಗಿಸಿಕೊಂಡಿದ್ದ ಧೀರ ಮಹಿಳೆ. ಸ್ವಾಭಿಮಾನ ಸಮಾಜಕ್ಕೆ ಕೈಜೋಡಿಸಿದ್ದ ದಿಟ್ಟ ಮಹಿಳೆ ಎಂದು ಅವರು ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರು ತಮ್ಮ ಪ್ರಾಂತ್ಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದರ ಜೊತೆಗೆ ನಾಡಿನ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದರು ಎಂದು ಅವರು ತಿಳಿಸಿದರು.
ಬ್ರಿಟಿಷರ ವಿರುದ್ದದ ಹೋರಾಟದಲ್ಲಿ ಬೆಳಗುವ ಹೆಸರುಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳದು ಮುಂಚೂಣಿಯಲ್ಲಿದೆ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ರಲ್ಲಿ ನಡೆದಿತ್ತು. ಅದಕ್ಕೂ 33 ವರ್ಷಗಳ ಮೊದಲೇ ಅಂದರೆ 1824 ರಲ್ಲೇ ನಮ್ಮ ನಾಡಿನ ಐತಿಹಾಸಿಕ ನೆಲ ಕಿತ್ತೂರಿನಲ್ಲಿ ಬ್ರಿಟಿಷರ ವಿರುದ್ದ ಹೋರಾಟ ನಡೆದಿತ್ತು ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಅವರು ಹುಟ್ಟಿದ ಊರು ಬೆಳಗಾವಿ ತಾಲ್ಲೂಕಿನ ಕಾಕತಿ ಗ್ರಾಮ. ಬೆಳಗಾವಿ ಜಿಲ್ಲಾ ಕೇಂದ್ರದಿಂದ ಎಂಟು ಕಿ.ಮೀ.ದೂರದಲ್ಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಡಿ.ಎಂ.ದಾನೋಜಿ ಅವರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು ನಾಡಿನ ಪ್ರಥಮ ಹೋರಾಟಗಾರ್ತಿಯಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಕುಸುಮ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್, ಜಿಲ್ಲಾ ಉದ್ಯೋಗ ವಿನಿಮಾಯಾದಿಕಾರಿ ಸಿ.ಜಗನ್ನಾಥ, ಕಾರ್ಮಿಕ ಇಲಾಖೆ ಅಧಿಕಾರಿ ರಾಮಚಂದ್ರ ನಾನಾ ಇಲಾಖೆ ಅಧಿಕಾರಿಗಳು ಇದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಸಾವಿತ್ರಿ ನಿರೂಪಿಸಿದರು. ಪತ್ತಾರ್ ಮತ್ತು ಷಡಕ್ಷರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು.







