ಸಮಾಜದಲ್ಲಿ ಶಾಂತಿ ಕದಡಲು ಬಿಜೆಪಿ ಯತ್ನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.24: ರಾಜಕೀಯ ಕಾರಣಕ್ಕಾಗಿ ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿ ನಾಯಕರು, ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಈ ನಡವಳಿಕೆ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದೆ. ಕಾನೂನು ಕೈಗೆತ್ತಿಕೊಳ್ಳಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಅಶೋಕ್ ಮೊದಲಾದವರು ಈ ಹಿಂದೆ ಟಿಪ್ಪು ವೇಷಧಾರಿಗಳಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದೇಕೆ. ವಿಧಾನಸಭೆಗೆ ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿಯವರದ್ದು ಎರಡು ನಾಲಿಗೆ ಅಲ್ಲವೇ, ಜನ ಇದನ್ನು ಅರ್ಥಮಾಡಿಕೊಳ್ಳುವುದಿಲ್ಲವೇ ಎಂದು ತಿಳಿಸಿದರು.
ಯಡಿಯೂರಪ್ಪ ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು 'ಅಲ್ಲಾಹನ ಮೇಲಾಣೆ ನಾನು ಮತ್ತೆ ಬಿಜೆಪಿ ಸೇರುವುದಿಲ್ಲ' ಎಂದು ಕೂಗಿದ್ದೇ ಕೂಗಿದ್ದು. ಇಂತಹ ರಾಜಕೀಯ ಇಬ್ಬಂದಿತನ ಜನರಿಗೂ ಗೊತ್ತಾಗುತ್ತದೆ. ಆಗೊಂದು, ಈಗೊಂದು ನಾಟಕವಾಡುವ ಯಡಿಯೂರಪ್ಪ ಮಾತಿಗೆ ಏನಾದರೂ ಕಿಮ್ಮತ್ತು ಇದೆಯೇ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಯಾಗಿ ಅಶೋಕ್ ಟಿಪ್ಪು ವೇಷಧಾರಿಗಳಾಗಿಯೆ ಜಯಂತಿ ಆಚರಿಸಿದ್ದರು. ಅಷ್ಟೇ ಅಲ್ಲ, ಟಿಪ್ಪು ಕುರಿತಾದ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಜಗದೀಶ್ ಶೆಟ್ಟರ್, ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ಅವರೆಲ್ಲ ಈಗ ವಿರೋಧ ಮಾಡುತ್ತಿರುವುದು ರಾಜಕೀಯ ಪ್ರೇರಿತ ಅಷ್ಟೇ ಎಂದು ಹೇಳಿದರು.
ಟಿಪ್ಪುಜಯಂತಿ ಆಚರಣೆ ಮಾಡುವುದು ಸರಕಾರದ ತೀರ್ಮಾನ. ಅದನ್ನು ವಿರೋಧಿಸುವವರಿಗೆ ಸಂವಿಧಾನ ಗೊತ್ತಿಲ್ಲ. ಟಿಪ್ಪು ಜಯಂತಿ ಆಚರಿಸುವವರನ್ನು ಗಲ್ಲಿಗೇರಿಸಬೇಕು ಎಂಬ ಸಂಘಪರಿವಾರದ ಮುಖಂಡರ ಹೇಳಿಕೆಗೆ ಮುಖ್ಯಮಂತ್ರಿ ಈ ಮೇಲಿನಂತೆ ತಿರುಗೇಟು ನೀಡಿದರು.
ಜನ ಪ್ರತಿನಿಧಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಸಂವಿಧಾನಕ್ಕೆ ಗೌರವ ನೀಡುವುದಾಗಿ ಹೇಳುತ್ತಾರೆ. ಈಗ ಈ ರೀತಿ ಮಾತನಾಡಿ ಅಗೌರವ ತೋರಿಸುತ್ತಾರೆ. ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟಿಪ್ಪುಜಯಂತಿಗೆ ವಿವಾದದ ಸ್ವರೂಪ ನೀಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವುದು ಅವರ ಲೆಕ್ಕಾಚಾರ ಎಂದರು.
ದೇವನಹಳ್ಳಿಯಲ್ಲಿ ಜನಿಸಿದ ಟಿಪ್ಪು ಕನ್ನಡಿಗರಲ್ಲವೇ? ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿಲ್ಲವೇ? ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರಿಗೆ ಖರ್ಚು ನೀಡಲಾಗದೆ ತನ್ನ ಮ್ಕಕಳನ್ನೇ ಅಡ ಇಟ್ಟವರು ಟಿಪ್ಪು. ಅವರು ಮುಸ್ಲಿಮ್ ಆಗಿರಬಹುದು. ಆದರೆ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮರಣವನ್ನಪ್ಪಿದ್ದು ಸುಳ್ಳೇ. ಯಾರೇ ಆಗಲಿ, ಇತಿಹಾಸವನ್ನು ತಿರುಚಬಾರದು ಎಂದು ಮುಖ್ಯಮಂತ್ರಿ ತಿಳಿಸಿದರು.
'ಐಟಿ ದಾಳಿ ರಾಜಕೀಯ ಪ್ರೇರಿತ'
ಆದಾಯ ತೆರಿಗೆ ಅಧಿಕಾರಿಗಳು ಕಾಂಗ್ರೆಸಿಗರನ್ನೆ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಇದರಿಂದ ರಾಜಕೀಯವಾಗಿ ಅನುಕೂಲವಾಗುತ್ತದೆ ಎಂದು ಬಿಜೆಪಿಯವರು ಭಾವಿಸಿದಂತಿದೆ. ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ದಾಳಿ ಮಾಡಿಸುವ ಕೇಂದ್ರ ಸರಕಾರವಿದು ಎಂದು ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಅವರೆ ಹೇಳಿದ್ದಾರೆ. ಕಾಂಗ್ರೆಸಿಗರನ್ನೆ ಗುರಿಯಾಗಿಸಿಕೊಂಡು ದಾಳಿ ಮಾಡುವುದೇಕೆ? ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಮನೆಗಳ ಮೇಲೆ ಏಕೆ ದಾಳಿ ಆಗುವುದಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
'ತಪ್ಪಿಸಿಕೊಳ್ಳಲು ಶೋಭಾ ಆ ರೀತಿ ಹೇಳುತ್ತಿದ್ದಾರೆ'
ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದಾಗ, ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸಮಿತಿ ರಚನೆ ಆಗಿದೆ. ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸದನ ಸಮಿತಿ ವರದಿ ಕೊಡಲಿ. ಆನಂತರ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಭ್ರಷ್ಟಾಚಾರ ನಡೆದಿದ್ದರೆ ಅದಕ್ಕೆ ಕಾರಿಗಅಧಿಳು ಹೊಣೆ ಎಂದು ಶೋಭಾ ಕರಂದ್ಲಾಜೆ ಹೇಳುವುದು ಸರಿಯಲ್ಲ. ಇಲಾಖೆಯಲ್ಲಿ ಏನಾದರೂ ನಡೆದರೆ ಉತ್ತರ ನೀಡುವವರು ಯಾರು. ಮಂತ್ರಿಗಳೇ ಅಲ್ಲವೇ. ತಪ್ಪಿಸಿಕೊಳ್ಳಲು ಶೋಭಾ ಆ ರೀತಿ ಹೇಳುತ್ತಿದ್ದಾರೆ.-ಸಿದ್ದರಾಮಯ್ಯ, ಮುಖ್ಯಮಂತ್ರಿ







