ಸಂಶೋಧನೆಗಳು ರೈತರ ಕೈ ಸೇರಲಿ: ಡಾ.ಶಿವಣ್ಣ
ಬೆಂಗಳೂರು, ಅ.24: ದೇಶದಲ್ಲಿ ಗ್ರಾಮೀಣ ವಲಸೆ ತಡೆಯಲು ಕೃಷಿ ಕ್ಷೇತ್ರದಲ್ಲಿನ ಸಂಶೋಧನೆಗಳು ರೈತರ ಕೈ ಸೇರಬೇಕು ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಚ್.ಶಿವಣ್ಣ ಹೇಳಿದ್ದಾರೆ.
ಮಂಗಳವಾರ ನಗರದ ಕೃಷಿ ವಿಶ್ವವಿದ್ಯಾನಿಲಯ ವಿಸ್ತರಣಾ ನಿರ್ದೇಶನಾಲಯದ ವತಿಯಿಂದ ನಗರದ ಜಿಕೆವಿಕೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷಿ ಲಾಭದಾಯಕ ಕ್ಷೇತ್ರವಲ್ಲ ಎಂಬ ಭಾವನೆಯಿಂದ ಗ್ರಾಮೀಣ ಭಾಗದ ಯುವಕರು ಉದ್ಯೋಗ ಬಯಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಈ ಪರಿಣಾಮದಿಂದಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿವೆ. ಕೃಷಿ ವಿಜ್ಞಾನದಲ್ಲಿ ನಡೆದಿರುವ ಸಂಶೋಧನೆಗಳು ಸಮಗ್ರವಾಗಿ ರೈತರ ಕೈ ಸೇರಿದರೆ ಕೃಷಿಯೂ ಲಾಭದಾಯಕ ಕ್ಷೇತ್ರವಾಗಲಿದೆ ಎಂದು ಹೇಳಿದರು.
ಮುಂದಿನ 30 ವರ್ಷಗಳಲ್ಲಿ ಜನಸಂಖ್ಯೆ 150 ಕೋಟಿ ಗಡಿ ದಾಟಲಿದೆ. ಭವಿಷ್ಯದಲ್ಲಿ ದೇಶದಲ್ಲಿ ಆಹಾರದ ಕೊರತೆ ಎದುರಾಗುವ ಭೀತಿಯಿದೆ. ಆಹಾರ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯುವಕರು ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಪ್ರಾಧ್ಯಾಪಕ ಡಾ. ಎಂ.ವಿ ಶ್ರೀನಿವಾಸಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರು ವಲಸೆ ಹೋಗುವುದನ್ನು ತಡೆಯಲು ಕೃಷಿ ಕಾಯಕ, ತರಬೇತಿ, ಕೌಶಲ್ಯದಂತಹ ಮೂಲ ಸೌಕರ್ಯಗಳನ್ನು ಕಲ್ಪಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೃಷಿ ತಜ್ಞ ಡಾ.ಶ್ರೀನಾಥ್ ದೀಕ್ಷಿತ್, ಪ್ರಾಧ್ಯಾಪಕ ಕೆ.ಶಿವರಾಮ್ ಸೇರಿದಂತೆ ಇತರರು ಇದ್ದರು.







