ಅಕ್ರಮವಾಗಿ ಮಂಜೂರಾಗಿರುವ ಬಗರ್ ಹುಕುಂ ಭೂಮಿ ವಶಕ್ಕೆ ಮನವಿ
ಬೆಂಗಳೂರು, ಅ.24: ಬಿಜೆಪಿಯ ಬಿಬಿಎಂಪಿಯ ಮಾಜಿ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ನಗರದ ಸುತ್ತಮುತ್ತ ಅಕ್ರಮವಾಗಿ ಮಂಜೂರು ಮಾಡಿರುವ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ವಿ.ಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮಂಗಳವಾರ ನಗರದ ಕಂದಾಯ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿ.ಶಂಕರ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡ ಹಾಗೂ ಕವಿಕಾ ಅಧ್ಯಕ್ಷ ಎಸ್.ಮನೋಹರ್, ಆನಂದ್, ಶೇಖರ್ ಸೇರಿದಂತೆ ಇತರೆ ಕಾರ್ಯಕರ್ತರು ಅಕ್ರಮವಾಗಿ ಮಂಜೂರು ಮಾಡಿರುವ ಬಗರ್ ಹುಕ್ಕುಂ ಸಾಗುವಳಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಕ್ರಮವಾಗಿ ಬಗರ್ ಹುಕ್ಕುಂ ಸಾಗುವಳಿ ಭೂಮಿಯನ್ನು ಮಂಜೂರು ಮಾಡಿರುವ ಕುರಿತು ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ರಾಜಕಾಲುವೆಯಲ್ಲಿ ಕೆರೆ ಒತ್ತುವರಿಯಲ್ಲಿನ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ಬಡವರು, ಮಧ್ಯವರ್ಗದವರನ್ನು ತೆರವುಗೊಳಿಸಲಾಗಿದೆ. ಇವರಿಗೆ ಕೂಡಲೇ ಪುನರ್ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.







