ತಾಜ್ ಮಹಲ್ ಆವರಣದಲ್ಲಿ ಶಿವ ಚಾಲಿಸ್ ಪಠಿಸಿದ ಹಿಂದೂ ಯುವವಾಹಿನಿ ಕಾರ್ಯಕರ್ತರು

ಆಗ್ರಾ, ಅ.24: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅ.26ರಂದು ತಾಜ್ ಮಹಲ್ ಗೆ ಭೇಟಿ ನೀಡಲಿದ್ದು, ಈ ನಡುವೆ ಹಿಂದೂ ಯುವವಾಹಿನಿಯ ಕಾರ್ಯಕರ್ತರು ತಾಜ್ ಮಹಲ್ ಆವರಣದಲ್ಲಿ ಶಿವ ಚಾಲಿಸ್ ಪಠಿಸಿದ್ದು, ಹೊಸ ವಿವಾದವೊಂದು ಸೃಷ್ಟಿಯಾಗಿದೆ.
ಹಿಂದೂ ಯುವವಾಹಿನಿಯ ಆಲಿಘರ್ ಘಟಕದ ಅಧ್ಯಕ್ಷ ಭರತ್ ಗೋಸ್ವಾಮಿ ಜೊತೆ ಆಗಮಿಸಿದ ಕಾರ್ಯಕರ್ತರು ಶಿವ ಚಾಲಿಸ್ ಪಠಿಸಲು ಆರಂಭಿಸಿದ್ದಾರೆ. ಈ ಸಂದರ್ಭ ಇದನ್ನು ಗಮನಿಸಿದ ಸಿಐಎಸ್ ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶಿವ ಚಾಲಿಸ್ ಹಾಡದಂತೆ ಹಿಂದೂ ಯುವವಾಹಿನಿಯ ಕಾರ್ಯಕರ್ತರನ್ನು ತಡೆದಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಸಿಐಎಸ್ ಎಫ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಹಿಂದೂ ಯುವವಾಹಿನಿಯ ಕಾರ್ಯಕರ್ತರು ತಾಜ್ ಮಹಲ್ ನಲ್ಲಿ ನಮಾಝ್ ಮಾಡಲು ಅವಕಾಶವಿದ್ದರೆ, ಶಿವ ಚಾಲಿಸ್ ಪಠಿಸುವುದು ಯಾಕೆ ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ.
ತಾಜ್ ಮಹಲ್ ವೀಕ್ಷಣೆಗೆ ಯಾರು ಬೇಕಾದರೂ ಬರಬಹುದು ಆದರೆ ಪ್ರಾರ್ಥನೆ ಸಲ್ಲಿಸಲು ಯಾರಿಗೂ ಅವಕಾಶವಿಲ್ಲ ಎಂದು ಸಿಬ್ಬಂದಿ ಎಚ್ಚರಿಸಿದ್ದಾರೆ ಎನ್ನಲಾಗಿದೆ, ಈ ಸಂದರ್ಭ ಹಿಂದೂ ಯುವವಾಹಿನಿ ಕಾರ್ಯಕರ್ತರು ಹಾಗು ಸಿಐಎಸ್ ಎಫ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ಶಿವ ಚಾಲಿಸ್ ಪಠಿಸಿದವರನ್ನು ಹೊರದಬ್ಬಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.







