‘ದಿ ವೈರ್’ನ ವರದಿಗಾರ್ತಿ, ಸಂಪಾದಕರಿಗೆ ಗುಜರಾತ್ ಕೋರ್ಟ್‌ನಿಂದ ಸಮನ್ಸ್
ಜಯ್ ಶಾ ಪ್ರಕರಣ

ಅಹ್ಮದಾಬಾದ್,ಅ.24: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸದಂತೆ ‘ದಿ ವೈರ್’ನ ವರದಿಗಾರ್ತಿ ಮತ್ತು ಸಂಪಾದಕರಿಗೆ ಇಲ್ಲಿಯ ಮಹಾನಗರ ನ್ಯಾಯಾಲಯವು ಮಂಗಳವಾರ ಸಮನ್‌ಗಳನ್ನು ಹೊರಡಿಸಿದ್ದು, ನ.13ರಂದು ತನ್ನೆದುರು ಹಾಜರಾಗುವಂತೆ ಆದೇಶಿಸಿದೆ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿಯು ಅಧಿಕಾರಕ್ಕೇರಿದ ಮಾರನೇ ವರ್ಷದಲ್ಲಿ ಜಯ್ ಶಾ ಅವರ ಟೆಂಪಲ್ ಎಂಟರ್‌ಪ್ರೈಸಸ್ ಪ್ರೈ.ಲಿ.ಕಂಪನಿಯ ವಹಿವಾಟು 16,000 ಪಟ್ಟು ಏರಿಕೆಯಾಗಿತ್ತು ಎಂದು ಸುದ್ದಿ ಜಾಲತಾಣ ‘ದಿ ವೈರ್’ ಅ.8ರಂದು ವರದಿಯನ್ನು ಪ್ರಕಟಿ ಸಿತ್ತು. ಇದರ ವಿರುದ್ಧ ಜಯ್ ಶಾ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ವರದಿಯ ಲೇಖಕಿ ರೋಹಿಣಿ ಸಿಂಗ್, ಸ್ಥಾಪಕ ಸಂಪಾದಕರಾದ ಸಿದ್ಧಾರ್ಥ ವರದರಾಜನ್, ಸಿದ್ಧಾರ್ಥ ಭಾಟಿಯಾ ಮತ್ತು ಎಂ.ಕೆ.ವೇಣು, ವ್ಯವಸ್ಥಾಪಕ ಸಂಪಾದಕ ಮನೋಬಿನ ಗುಪ್ತಾ, ಸಾರ್ವಜನಿಕ ಸಂಪಾದಕಿ ಪಮೇಲಾ ಫಿಲಿಪೋಸ್ ಜೊತೆಗೆ ಪ್ರಕಾಶನ ಸಂಸ್ಥೆ ಫೌಂಡೇಷನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಅನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
ಜಯ್ ಶಾ ಹಾಜರುಪಡಿಸಿದ್ದ ಇಬ್ಬರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಕೊಂಡ ನ್ಯಾ.ಎಸ್.ಕೆ.ಗಾಧ್ವಿ ಅವರು ಶಾ ಪರ ವಕೀಲ ಎಸ್.ವಿ.ರಾಜು ಅವರ ವಾದವನ್ನೂ ಆಲಿಸಿದರು.
ಜಯ್ ಶಾ ಅವರು ಅಹ್ಮದಾಬಾದ್ ಜಿಲ್ಲಾ ನ್ಯಾಯಾಲಯ(ಮಿರ್ಝಾಪುರ)ದಲ್ಲಿ ‘ದಿ ವೈರ್’ ವಿರುದ್ಧ 100 ಕೋ.ರೂ.ಗಳ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದು, ಶಾ ಕುರಿತು ಯಾವುದೇ ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯವು ಅದಕ್ಕೆ ಆದೇಶಿಸಿದೆ.







