ಮುಸ್ಲಿಮರ ಮತಗಳು ನನಗೆ ಬೇಕಿಲ್ಲ ಎಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ
ಎಚ್.ಡಿ.ದೇವೇಗೌಡ ಆಕ್ರೋಶ

ಬಳ್ಳಾರಿ, ಅ.24: ಮುಸ್ಲಿಮರ ಮತಗಳು ನನಗೆ ಬೇಕಿಲ್ಲ ಎಂದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೂವಿನಹಡಗಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರು ಮತ್ತು ಕ್ರೈಸ್ತರು ಈ ದೇಶವನ್ನು ಬಿಟ್ಟು ಎಲ್ಲಿಗೆ ಹೋಗಬೇಕು. ಎರಡನೆ ಪಾಕಿಸ್ತಾನವನ್ನು ಸೃಷ್ಟಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರ ಆಚರಿಸುತ್ತಿರುವ ಟಿಪ್ಪು ಸುಲ್ತಾನ್ ಜಯಂತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಪರ-ವಿರೋಧ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಆದರೆ, ಈ ವಿಚಾರದಲ್ಲಿ ಬಿಜೆಪಿ ಅತಿರೇಕಕ್ಕೆ ಹೋಗಬಾರದು. ಈ ಹಿಂದೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಮಹಾದಾಯಿ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದ್ದೇನೆ. ಅವರು ಕಣ್ಣಿದ್ದು ಕುರುಡರು, ಕಿವಿಯಿದ್ದು ಕಿವುಡರಾದರೆ ನಾನು ಏನು ಮಾಡೋದು. ಗುಜರಾತ್‌ನಲ್ಲಿ ಹಣಕ್ಕಾಗಿ ಯುವಕರನ್ನು ಖರೀದಿಸುತ್ತಿರುವುದು ನೋಡಿದರೆ ಕರ್ನಾಟಕದಲ್ಲಿ ಈ ಹಿಂದೆ ಮಾಡಿದ್ದ ಅಪರೇಷನ್ ಕಮಲ ನೆನಪಿಗೆ ಬರುತ್ತಿದೆ. ಅದೀಗ ಗುಜರಾತ್‌ನಲ್ಲೂ ನಡೆಯುತ್ತಿದೆ ಎಂದು ಟೀಕಿಸಿದರು.
ಮನಮೋಹನ್‌ಸಿಂಗ್ ಸರಕಾರದಲ್ಲಿ ಕಠಿಣವಾಗಿ ಮಾತನಾಡಿದ್ದೆ. ಕಳೆದ ಬಜೆಟ್ ಮೇಲೆ ಮಾತನಾಡಿದ್ದೇನೆ. ಆದರೆ, ನರೇಂದ್ರಮೋದಿ ನೇತೃತ್ವದ ಸರಕಾರವು ಸಂಖ್ಯಾಬಲ ಎಂಬ ಹೊಸ ನಿಯಮವನ್ನು ಜಾರಿಗೆ ತಂದು ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಬಗ್ಗೆ ನಿರ್ಲಕ್ಷ್ಯದ ಮನೋಭಾವನೆ ಹೊಂದಿವೆ. ಹುಳು ಬಾಧೆಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕೆಲವೆಡೆ ಅತೀ ಮಳೆಯಿಂದ ಬೆಳೆ ಹಾನಿಯಾಗಿದೆ. ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರಕ್ಕೆ ಕಲ್ಪಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸುವುದಾಗಿ ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಈಗಾಗಲೇ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಇದನ್ನು ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸುತ್ತೇವೆ. ಚುನಾವಣೆ ಸಮೀಪಿಸುತ್ತಿದೆ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಲಿ, ಆಯಾರಾಮ್, ಗಯಾರಾಮ್(ಪಕ್ಷಾಂತರಿಗಳು)ಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಪ್ರಜ್ವಲ್‌ಗೆ ಟಿಕೆಟ್ ನೀಡುವ ವಿಚಾರದಲ್ಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಮತ್ತು ಕುಮಾರಸ್ವಾಮಿ ಮಾತ್ರ ಟಿಕೆಟ್ ಹಂಚಿಕೆ ಮಾಡುವುದಿಲ್ಲ. ಪಕ್ಷದ ಪ್ರಮುಖ ಎಲ್ಲ ನಾಯಕರ ಅಭಿಪ್ರಾಯವನ್ನು ಕ್ರೋಡೀಕರಿಸಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ ಎಂದು ಅವರು, ರಾಜ್ಯ ಸರಕಾರದ ಸಾಧನಾ ಸಮಾವೇಶಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿವೆ. ರೈತ ಹಿತಕ್ಕಾಗಿ ಅವರೊಂದಿಗೆ ಹೋರಾಟ ರೂಪಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ನಾನು ಪ್ರಧಾನಿಯಾದಾಗ ದೇಶಕ್ಕಾಗಿ ಏನು ಮಾಡಿದೆ ಎಂಬುದನ್ನು ಜನರಿಗೆ ತಿಳಿಸಲು ಎಲ್ಲ ವಿವರಣೆಗಳನ್ನು ಒಳಗೊಂಡ ಪುಸ್ತಕ ಇನ್ನು 10 ದಿನಗಳಲ್ಲಿ ಹೊರ ಬರಲಿದೆ. ನನ್ನ ಹಾಗೂ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಆಗಿರುವ ಸಾಧನೆಯನ್ನು ಜರಿಗೆ ತಿಳಿಸುತ್ತೇವೆ ಎಂದರು.







