ರಾಜ್ಯ ಕಡಲ ತೀರ ವಲಯ ನಿರ್ವಹಣಾ ಯೋಜನೆ ಕರಡುಪ್ರತಿಗೆ ಕೆಲ ಬದಲಾವಣೆ, ತಿದ್ದುಪಡಿಗೆ ಜಿಪಂ ಸದಸ್ಯರ ಸಲಹೆ
ಜಿಪಂ ಸಾಮಾನ್ಯ ಸಭೆ

ಉಡುಪಿ, ಅ.24: ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅಧಿಸೂಚನೆ 2011ರಂತೆ ಚೆನ್ನೈನ ಎನ್‌ಸಿಎಸ್‌ಸಿಎಂ ಸಂಸ್ಥೆ ರೂಪಿಸಿರುವ ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ (ಸಿಝಡ್‌ಎಂಪಿ)ಯ ಕರಡು ಪ್ರತಿಯ ಕುರಿತು ಇಂದಿಲ್ಲಿ ನಡೆದ ಜಿಪಂನ 9ನೇ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ಸದಸ್ಯರು ಕರಡಿನಲ್ಲಿ ಹಲವಾರು ಬದಲಾವಣೆ ಹಾಗೂ ತಿದ್ದುಪಡಿ ಮಾಡುವಂತೆ ಸಲಹೆ ನೀಡಿದರು.
ಜಿಪಂ ಅಧ್ಯಕ್ಷ ದಿನಕರಬಾಬು ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಾಮಾನ್ಯ ಸಭೆಯಲ್ಲಿ ಉಡುಪಿಯ ಸಿಆರ್‌ಝಡ್ ಅಧಿಕಾರಿ ಧೀರಜ್ ಅವರು ಸಿಆರ್‌ಝಡ್ 1996ರ ಕಾನೂನು ಹಾಗೂ ಚೆನ್ನೈನ ಸಂಸ್ಥೆಯೊಂದು ಹೊಸದಾಗಿ ರಚಿಸಿರುವ ಸಿಝಡ್‌ಎಂಸಿ ಯೋಜನೆಯ ಕರಡು ಪ್ರತಿಯಲ್ಲಿರುವ ಪ್ರಮುಖ ವ್ಯತ್ಯಾಸಗಳತ್ತ ಸದಸ್ಯರ ಗಮನ ಸೆಳೆದರು.
ಚೆನ್ನೆ ಸಂಸ್ಥೆಯು 1:25,000 ಅಳತೆಯ ನಕ್ಷೆಯಲ್ಲಿ ಕರಡು ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆಯನ್ನು ತಯಾರಿಸಿದ್ದು, ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರವು ಕಳೆದ ಆ.31ರ ಸಭೆಯಲ್ಲಿ ಇದನ್ನು ಸ್ವೀಕರಿಸಿ, ಪಾಲುದಾರರು ಹಾಗೂ ಸಾರ್ವಜನಿಕರಿಂದ ಸಲಹೆ, ಆಕ್ಷೇಪ ಹಾಗೂ ಅನಿಸಿಕೆಗಳನ್ನು ಆಹ್ವಾನಿಸಿದೆ. ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಕರಡಿನ ಕುರಿತು ಜಿಲ್ಲಾಧಿಕಾರಿಗಳು ಸಭೆಯನ್ನು ಕರೆದು ಚರ್ಚಿಸಿದ್ದಾರೆ. ಸಾರ್ವಜನಿಕರಿಗೆ ಸಲಹೆ, ಆಕ್ಷೇಪ ಹಾಗೂ ಅನಿಸಿಕೆಗಳನ್ನು ಸಲ್ಲಿಸಲು ನ.7ರವರೆಗೆ ಕಾಲಾವಕಾಶವಿದ್ದು, ಆ ಬಳಿಕ ಅದನ್ನು ಅಂತಿಮ ಗೊಳಿಸಿ ಜಾರಿಗೆ ತರಲಾಗುತ್ತದೆ ಎಂದರು.
ಪ್ರಮುಖ ಬದಲಾವಣೆ: ಹೊಸ ಡ್ರಾಫ್ಟ್‌ನಂತೆ ನಡ್ಸಾಲು ಗ್ರಾಮದ ಹೆಜಮಾಡಿಯ ಕಾಮಿನಿ ಹೊಳೆ ಇನ್ನು ಸಿಆರ್‌ಝಡ್ ವ್ಯಾಪ್ತಿಗೆ ಒಳಪಡಲಿದೆ. ಈ ಹಿಂದೆ ಅದ್ನು ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಹೊಸ ಡ್ರಾಫ್ಟ್‌ನಂತೆ ನಡ್ಸಾಲು ಗ್ರಾಮದ ಹೆಜಮಾಡಿಯ ಕಾಮಿನಿ ಹೊಳೆ ಇನ್ನು ಸಿಆರ್‌ಝಡ್ ವ್ಯಾಪ್ತಿಗೆ ಒಳಪಡಲಿದೆ. ಈ ಹಿಂದೆ ಅದನ್ನು ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಪಡುತೋನ್ಸೆಯಿಂದ ಉದ್ಯಾವರದವರೆಗಿನ ಗ್ರಾಮಗಳನ್ನು -ಉದ್ಯಾವರ, ಪಡುಕೆರೆ, ಕುತ್ಪಾಡಿ, ಕಡೆಕಾರು, ಕೊಡವೂರು, ಬಡಾನಿಡಿಯೂರು, ತೆಂಕನಿಡಿಯೂರು, ಪಡುತೋನ್ಸೆ, ಮೂಡುತೋನ್ಸೆ, ಶಿವಳ್ಳಿ, ಹೆರ್ಗ- ಸಿಆರ್‌ಝಡ್-1 ಮತ್ತು 3ರಿಂದ, ಸಿಆರ್‌ಝಡ್-2ಕ್ಕೆ ಸೇರಿಸಲಾಗಿದೆ. ಇದರಿಂದ ಈ ಗ್ರಾಮಗಳಲ್ಲಿ ಮನೆ ನಿರ್ಮಾಣವೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ.
ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕೆಲವು ಭಾಗಗಳನ್ನು ಸಿಆರ್‌ಝಡ್-1ರಿಂದ ಸಿಆರ್‌ಝಡ್-3ಕ್ಕೆ ಬದಲಾಯಿಸಲಾಗಿದೆ. ಅದೇ ರೀತಿ ಇಡೀ ಕೋಟೇಶ್ವರ ಗ್ರಾಮ ಹಾಗೂ ಬಿಜಾಡಿಯ ಕೆಲವು ಭಾಗಗಳನ್ನು ಅಭಿವೃದ್ಧಿ ಹೊಂದಿದ ಪ್ರದೇಶವೆಂದು ಪರಿಗಣಿಸಿ ಸಿಆರ್‌ಝಡ್-2ರಿಂದ ಸಿಆರ್‌ಝಡ್-3ಕ್ಕೆ ಬದಲಾಯಿಸಲಾಗಿದ್ದು, ಇದರಿಂದ ಇಲ್ಲಿ ಇನ್ನು ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಸಾದ್ಯವಿಲ್ಲ. ಕೇವಲ 1991ಕ್ಕಿಂತ ಮೊದಲಿದ್ದ ಮನೆಗಳನ್ನು ದುರಸ್ತಿಗೊಳಿಸಬಹುದು.
*ಕುಂದಾಪುರ ಕಸಬಾ ಗ್ರಾಮವನ್ನು ಸಿಆರ್‌ಝಡ್-1,2,3ರಿಂದ ಸಿಆರ್‌ಝಡ್-2ಕ್ಕೆ ಬದಲಾಯಿಸಲಾಗಿದೆ. ಹಾಲಾಡಿ ನದಿಯ ಸಿಆರ್‌ಝಡ್ ವ್ಯಾಪ್ತಿಯನ್ನು ಬಸರೂರು, ಹಟ್ಟಿಯಂಗಡಿಯಿಂದ ಗುಲ್ವಾಡಿ, ಬಳ್ಕೂರುವರೆಗೆ ವಿಸ್ತರಿಸಲಾಗಿದೆ. ಆದರೆ ಚಕ್ರಾ ನದಿಯ ವ್ಯಾಪ್ತಿಯನ್ನು ಕರ್ಕುಂಜೆ, ವಂಡ್ಸೆಯಿಂದ ಹೆಮ್ಮಾಡಿ, ಹಕ್ಲಾಡಿಗೆ ಇಳಿಸಲಾಗಿದೆ. ಸೌಪರ್ಣಿಕಾ ನದಿಯ ವ್ಯಾಪ್ತಿಯನ್ನು ನಾವುಂದ, ಬಡಾಕೆರೆಯಿಂದ ಸೇನಾಪುರ, ಹೊಸಾಡುವರೆಗೆ ಇಳಿಸಲಾಗಿದೆ.
*ಗಂಗೊಳ್ಳಿ ಗ್ರಾಮದ ಕೆಲ ಭಾಗ ಸಿಆರ್‌ಝಡ್-2ರಲ್ಲಿದ್ದು, ಈಗ ಹೊಸ ಯೋಜನೆಯಲ್ಲಿ ಗಂಗೊಳ್ಳಿ ಇಡೀ ಗ್ರಾಮ ಸಿಆರ್‌ಝಡ್-3ಕ್ಕೆ ಸೇರಿಸಲ್ಪಟ್ಟಿದೆ. ಇದರಿಂದ ಗಂಗೊಳ್ಳಿಯಲ್ಲಿ ಯಾವುದೇ ಅಭಿವೃದ್ದಿ ಕೈಗೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಅವರು ವಿವರಿಸಿದರು.
ಬಳಿಕ ನಡೆದ ಚರ್ಚೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಸದಸ್ಯರಾದ ಜನಾರ್ದನ ತೋನ್ಸೆ, ಬಾಬು ಶೆಟ್ಟಿ, ಗೌರಿ ದೇವಾಡಿಗ, ಸುರೇಶ್ ಬಟವಾಡಿ ಹಾಗೂ ಇತರರು ಈ ಕರಡಿನಲ್ಲಿ ಹಲವು ಬದಲಾವಣೆಗಳಾಗಬೇಕು ಎಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಶೈಲೇಶ್ ಸಮಿತಿಯ ವರದಿಯನ್ನು ಗಣನೆಗೆ ತೆಗೆದುಕೊಂಡು ಕಾನೂನನ್ನು ಸಮುದ್ರದ ತೀರದಲ್ಲಿ ಕೇವಲ 50 ಮೀ.ಗೆ ಸೀಮಿತಗೊಳಿ ಸಬೇಕು. ಈಗ ಕೇರಳ ಹಾಗೂ ಗೋವಾಗಳಲ್ಲಿ ಸಿಆರ್‌ಝಡ್ ವ್ಯಾಪ್ತಿ ತೀರದಿಂದ 50ಮೀ.ಗಿದ್ದು, ಕರ್ನಾಟಕದಲ್ಲೂ ಇದನ್ನೇ ಅಳವಡಿಸಬೇಕು. ಅಲ್ಲದೇ ಹೊಳೆಗಳ ಚಿಕ್ಕ ಚಿಕ್ಕ ತೋಡುಗಳನ್ನು ಸಿಆರ್‌ಝಡ್ ವ್ಯಾಪ್ತಿಯಿಂದ ಹೊರಗಿಡಬೇಕು. ಹೊಳೆಗಳಲ್ಲೂ ಈ ವ್ಯಾಪ್ತಿಯನ್ನು 100ಮೀ. ಸೀಮಿತಗೊಳಿಸ ಬೇಕೆಂದು ಒತ್ತಾಯಿಸಿದರು.
ಕೊನೆಗೆ ಈ ಬಗ್ಗೆ ಜಿಪಂ ನಿರ್ಣಯಗಳನ್ನು ಸ್ವೀಕರಿಸಿದ್ದು, ಕರಡು ಪರಿಶೀಲನಾ ಸಮಿತಿಗೆ ಕಳುಹಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಿಇಓ ಶಿವಾನಂದ ಕಾಪಸಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಕೋಟ್ಯಾನ್, ಶಶಿಕಾಂತ ಪಡುಬಿದ್ರಿ, ಬಾಬು ಶೆಟ್ಟಿ, ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.







