ಲೈನ್‌ಮ್ಯಾನ್‌ಗಳಿಗೆ ‘ಪವರ್ ಮ್ಯಾನ್’ಗಳಾಗಿ ನಾಮಕರಣ: ಡಿ.ಕೆ.ಶಿವಕುಮಾರ್
ಬೆಂಗಳೂರು, ಅ.24: ಕಂದಾಯ ಇಲಾಖೆಯಲ್ಲಿ ಕೆಳ ಹಂತದಲ್ಲಿ ಕಾರ್ಯ ನಿರ್ವಹಿಸುವ ಲೈನ್ ಮ್ಯಾನ್‌ಗಳಿಗೆ ‘ಪವರ್ ಮ್ಯಾನ್’ಗಳೆಂದು ನಾಮಕರಣ ಮಾಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಪವರ್‌ಮ್ಯಾನ್‌ಗಳ ಕೆಲಸ ಮಹತ್ವದ್ದಾಗಿದೆ. ಆದರೆ, ಅವರನ್ನು ಪವರ್‌ಮ್ಯಾನ್‌ಗಳೆಂದು ಕರೆಯುವ ಮೂಲಕ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಪವರ್‌ಮ್ಯಾನ್‌ಗಳೆಂದು ನಾಮಕರಣ ಮಾಡುವ ಸಂಬಂಧ ಶಾಸಕಾಂಗದ ಪ್ರತಿನಿಧಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸಲಹೆ ಪಡೆದುಕೊಂಡೇ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಪವರ್ ಮ್ಯಾನ್‌ಗಳಿಂದ ಹಲವು ಸಲ ಬೇಡಿಕೆ ಬಂದಿತ್ತು. ಹೀಗಾಗಿ ಲೈನ್‌ಮ್ಯಾನ್ ಬದಲಾಗಿ ಪವರ್ ಮ್ಯಾನ್‌ಗಳೆಂದು ಕರೆಯಲಾಗಿದೆ ಎಂದು ಹೇಳಿದರು.
21,516 ಹುದ್ದೆ ಭರ್ತಿ: ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಸುಮಾರು 82700ರಷ್ಟು ಮಂಜೂರಾದ ಹುದ್ದೆಗಳ ಪೈಕಿ 33000 ಖಾಲಿ ಹುದ್ದೆಗಳಿದ್ದು, ಅದರಲ್ಲಿ 21516 ಹುದ್ದೆಗಳನ್ನು ಅತ್ಯಂತ ಪಾರದರ್ಶಕವಾಗಿ ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನು ಉಳಿದ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ 72500ರಷ್ಟು ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸರಬರಾಜನ್ನು ನೀಡಲಾಗಿದೆ. ಹಾಗೂ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಅಡಿ 27ಲಕ್ಷ ಫಲಾನುಭವಿಗಳ ಮೇಲೆ ವಿದ್ಯುತ್ ಸಂಪರ್ಕವನ್ನು ನೀಡಿ 40 ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಅ.28ರಂದು ಪವರ್ ಪ್ರಶಸ್ತಿ
ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಶೇ.39ರಷ್ಟು ಹೆಚ್ಚಳವಾಗಿದೆ. ಪ್ರಸ್ತುತ ರಾಜ್ಯವು 19,500ಮೆ.ವ್ಯಾಟ್‌ನಷ್ಟು ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಇದಕ್ಕೆ ಪವರ್‌ಮ್ಯಾನ್‌ಗಳಿಂದ ಪ್ರಾರಂಭಗೊಂಡು ಕಂದಾಯ ಇಲಾಖೆಯ ಎಲ್ಲ ವಿಭಾಗದ ನೌಕರರ, ಅಧಿಕಾರಿಗಳು ದ್ಷತೆಯಿಂದ ಕೆಲಸ ಮಾಡಿದ್ದು ಕಾರಣ. ಹೀಗಾಗಿ ಕಂದಾಯ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ನೌಕರರನ್ನು ಗುರುತಿಸಿ ‘ಪವರ್ ಅರ್ವಾಡ್ಸ್ 2017’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಗೆ ಸುಮಾರು 124 ಮಂದಿಯನ್ನು ಗುರುತಿಸಲಾಗಿದ್ದು, ಅ.28ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.







