ಸಾರ್ವಜನಿಕ ಹಿತದೃಷ್ಟಿಯಿಂದ ಹೈಕೋರ್ಟ್ ಆದೇಶ ಪಾಲನೆ: ಎಚ್.ಎಂ.ರೇವಣ್ಣ
100 ಸಿಸಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರ ನಿಷೇಧ
ಬೆಂಗಳೂರು, ಅ.24: ರಾಜ್ಯ ಹೈಕೋರ್ಟ್ 100 ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರನ್ನು ಕೂರಿಸಿಕೊಂಡು ಪ್ರಯಾಣ ಮಾಡುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು, ಸಾರ್ವಜನಿಕ ಹಿತದೃಷ್ಟಿಯಿಂದ ಪಾಲನೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ನಿಯಮ 143(3) ಪ್ರಕಾರ ಹೈಕೋರ್ಟ್ ಆದೇಶ ನೀಡಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರದ ಹಸ್ತಕ್ಷೇಪವೇನು ಇಲ್ಲ ಎಂದರು.
ಈಗಾಗಲೇ ನೋಂದಣಿಯಾಗಿರುವ ವಾಹನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಹೊಸದಾಗಿ ನೋಂದಣಿಯಾಗುವ ವಾಹನಗಳಿಗೆ ಮಾತ್ರ ಇದು ಅನ್ವಯಿಸಲಿದೆ. ಹೈಕೋರ್ಟ್ ನೀಡಿರುವ ಆದೇಶವು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕೆಲವು ಈ ಆದೇಶವನ್ನು ಸ್ವಾಗತಿಸಿದ್ದರೆ, ಕೆಲವರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ಮುಕ್ತ ಮನಸ್ಸು ಹೊಂದಿದ್ದು, ಜನರು ಅಪೇಕ್ಷೆ ಪಟ್ಟರೆ ಕರ್ನಾಟಕ ಮೋಟಾರು ವಾಹನ ಕಾಯ್ದೆಯ ನಿಯಮ 143(3)ಕ್ಕೆ ತಿದ್ದುಪಡಿ ತರಲು ಸಿದ್ಧವಿದೆ. ಅದಕ್ಕಾಗಿ ವಿಧಾನಸಭೆಯ ಅನುಮೋದನೆ ಪಡೆಯಬೇಕಾಗುತ್ತದೆ ಎಂದರು.
ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ 100 ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಾಮರ್ಥ್ಯದ ವಾಹನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರಿಗೆ ಇಲಾಖೆಯನ್ನು ಜನಸ್ನೇಹಿಗೊಳಿಸಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ, ಅವಕಾಶ ಸಿಕ್ಕಿದ ಕಡೆಯಲ್ಲ ಸ್ಪಂದಿಸುತ್ತೇನೆ ಎಂದು ಹೇಳಿದರು.
ದಾಖಲೆ ಆದಾಯ: ದೀಪಾವಳಿ ಹಬ್ಬದ ಪ್ರಯುಕ್ತ ಕೆಎಸ್ಸಾರ್ಟಿಸಿ 1500 ಬಸ್ ಗಳು ಕಾರ್ಯನಿರ್ವಹಿಸಿವೆ. ಅ.23ರಂದು ಒಂದೇ ದಿನದಲ್ಲಿ ಕೆಎಸ್ಸಾರ್ಟಿಸಿ 13.67 ಕೋಟಿ ರೂ.ಗಳ ದಾಖಲೆಯ ಆದಾಯ ಗಳಿಸಿದೆ. ಈ ಸಾಧನೆಗಾಗಿ ನಾನು ನಿಗಮದ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು, ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ನ್ಯಾಯಯುತವಾಗಿ ಡೀಸೆಲ್ ದರವನ್ನು ಕಡಿಮೆ ಮಾಡಿದರೆ, ದೇಶದಲ್ಲೇ ಮೊದಲನೆಯವನಾಗಿ ನಾನು ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಗಳ ಪ್ರಯಾಣ ದರವನ್ನು ಕಡಿಮೆ ಮಾಡುತ್ತೇನೆ ಎಂದು ರೇವಣ್ಣ ಹೇಳಿದರು.
ಮೈಸೂರಿನಲ್ಲಿ ಶಾಲಾ ಬಾಲಕನನ್ನು ಬಸ್ ಬಾಗಿಲಿನಿಂದ ಹೊರದೂಡಿ ಅಮಾನವೀಯ ವರ್ತನೆ ತೋರಿದ್ದ ಕಂಡಕ್ಟರ್ ಹಾಗೂ ಚಾಲಕನ ವಿರುದ್ಧ ಕೂಡಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಆದೇಶ ನೀಡಿದ್ದಾರೆ.
ಅಲ್ಲದೆ, ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ರೇವಣ್ಣ, ಬಾಲಕನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಸೂಚಿಸಿದ್ದಾರೆ. ಘಟನೆ ಕುರಿತು ಕೂಡಲೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.







