ಜನರ ಗಳಿಕೆ ದೋಚಲು ಪಾನ್ ಇಂಡಿಯಾ ತೆರಿಗೆ ಪದ್ಧತಿ: ರಾಹುಲ್ ಗಾಂಧಿ

ಹೊಸದಿಲ್ಲಿ, ಅ. 24: ಪಾನ್ ಇಂಡಿಯಾ ತೆರಿಗೆ ಪದ್ಧತಿಯನ್ನು ಜನರ ಗಳಿಕೆ ದೋಚಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಗಬ್ಬರ್ ಸಿಂಗ್ ತೆರಿಗೆ ಎಂದು ವಿವರಿಸಿದ ದಿನದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
“ಕಾಂಗ್ರೆಸ್ ಜಿಎಸ್‌ಟಿ-ನಿಜವಾದ ಸರಳ ತೆರಿಗೆ. ಮೋದಿಜಿ ಜಿಎಸ್‌ಟಿ-ಗಬ್ಬರ್ ಸಿಂಗ್ ತೆರಿಗೆ ಗಳಿಸಿದ್ದನ್ನು ನಮಗೆ ನೀಡಿ ಎಂದೆನ್ನುವ ತೆರಿಗೆ” ಎಂದು ಅವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಶಿಫಾರಸು ಮಾಡಿದ ಜಿಎಸ್‌ಟಿ ಹಾಗೂ ಬಿಜೆಪಿ ಸರಕಾರ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿರುವ ಜಿಎಸ್‌ಟಿಯ ಭಿನ್ನತೆಯ ಬಗ್ಗೆ ರಾಹುಲ್ ಗಾಂಧಿ ಬೆಳಕು ಚೆಲ್ಲಿದ್ದರು.
ಕಾಂಗ್ರೆಸ್ ಪ್ರಸ್ತಾಪಿಸಿರುವ ಜಿಎಸ್‌ಟಿ ದೇಶಾದ್ಯಂತ ಶೇ. 18ರ ಏಕ ತೆರಿಗೆ. ಇದರಲ್ಲಿ ಕೆಲವು ಅರ್ಜಿಗಳನ್ನು ಮಾತ್ರ ತುಂಬಿಸಬೇಕು. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅನುಷ್ಠಾನಗೊಳಿಸಿದ ಜಿಎಸ್‌ಟಿ ಶೇ. 28 ತೆರಿಗೆ. ಇದರಲ್ಲಿ ಹಲವು ಅರ್ಜಿಗಳನ್ನು ತುಂಬಬೇಕು.







