ಮಡಿಕೇರಿ: ಮಧ್ಯಂತರ ಪರಿಹಾರಕ್ಕೆ ಸರಕಾರಿ ನೌಕರರ ಸಂಘ ಆಗ್ರಹ

ಮಡಿಕೇರಿ, ಅ.24: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಣೆಯ ನಿಟ್ಟಿನಲ್ಲಿ 6ನೆ ವೇತನ ಆಯೋಗದ ಅಂತಿಮ ವರದಿ ಸಲ್ಲಿಸುವುದಕ್ಕೆ ಪೂರ್ವಭಾವಿಯಾಗಿ ಪ್ರಸಕ್ತ ಸಾಲಿನ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇ.30 ರಷ್ಟು ಮಧ್ಯಂತರ ಪರಿಹಾರವನ್ನು ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆ ಸರ್ಕಾರವನ್ನು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ರವಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.25ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತು ತಾಲೂಕು ಕೇಂದ್ರಗಳ ತಹಶೀಲ್ದಾರ್ ಕಚೇರಿ ಮುಂಭಾಗ ಆ ವ್ಯಾಪ್ತಿಯ ಸರ್ಕಾರಿ ನೌಕರರು ಮಧ್ಯಾಹ್ನ 1 ಗಂಟೆಗೆ ಸಾಂಕೇತಿಕ ಧರಣಿ ನಡೆಸಲಿದ್ದು, ಅದೇ ರೀತಿ ರಾಜ್ಯವ್ಯಾಪಿ ಏಕಕಾಲದಲ್ಲಿ ಧರಣಿ ನಡೆಯಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ 7ನೆ ವೇತನ ಆಯೋಗದ ವೇತನ, ಭತ್ಯೆಗಳು ಮತ್ತು ತುಟ್ಟಿ ಭತ್ಯೆ ಶಿಫಾರಸುಗಳು ರಾಜ್ಯ ಸರ್ಕಾರಿ ನೌಕರರಿಗೂ ಯಥಾವತ್ತಾಗಿ ಅನುಷ್ಠಾನಗೊಳಿಸಿ ಇದೇ ಸಾಲಿನ ಏಪ್ರಿಲ್ 1 ರಿಂದ ಪೂರ್ವಾನ್ವಯವಾಗಿ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘ ಈ ಸಂಬಂಧ ಹಿಂದೆಯೇ ರಾಜ್ಯದ ಮುಖ್ಯ ಮಂತ್ರಿಗಳು ಮತ್ತು ವೇತನ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಬೇಡಿಕೆಯನ್ನು ಸಲ್ಲಿಸಿದೆ. ಆ ಸಂದರ್ಭ 6ನೆ ವೇತನ ಆಯೋಗದ ವರದಿಯನ್ನು ಪ್ರಸಕ್ತ ಸಾಲಿನ ಸೆಪ್ಟೆಂಬರ್ ಒಳಗೆ ನೀಡುವಂತೆ ಸೂಚಿಸಲಾಗಿತ್ತಾದರು, ಇದೀಗ ಅವಧಿಯನ್ನು ಜನವರಿ 18ರವರೆಗೆ ವಿಸ್ತರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಎ.ಜೆ.ಮಹೇಶ್, ಪ್ರಧಾನ ಕಾರ್ಯದರ್ಶಿ ಎನ್.ಟಿ. ಮುತ್ತಣ್ಣ, ಉಪಾಧ್ಯಕ್ಷ ಸಿ.ಎ.ಅಯ್ಯಣ್ಣ ಹಾಗೂ ಖಜಾಂಚಿ ಎನ್.ಯು.ಯೋಗೇಶ್ ಉಪಸ್ಥಿತರಿದ್ದರು.







