ಹೋರಿ ಬೆದರಿಸುವ ಸ್ಪರ್ಧೆ ನಿಷೇಧಕ್ಕೆ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ, ಅ.24: ಹೋರಿ ಬೆದರಿಸುವ ಸ್ಪರ್ಧೆಯನ್ನು ನಿಷೇಧಿಸಿರುವುದನ್ನು ವಿರೋಧಿಸಿ ಹಾಗೂ ಈ ಸ್ಪರ್ಧೆಗೆ ಸೊರಬ ತಾಲೂಕಿನಲ್ಲಿ ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸುವಂತೆ ಆಗ್ರಹಿಸಿ, ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಮತ್ತು ರತ್ನ ಭಾರತ ರೈತ ಸಮಾಜವು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿತು.
ಹೋರಿ ಬೆದರಿಸುವ ಸ್ಪರ್ಧೆಯು ತಲಾತಲಾಂತರದಿಂದ ನಡೆದುಕೊಂಡು ಬರುತ್ತಿದ್ದು, ಇದೊಂದು ಗ್ರಾಮೀಣ ಪ್ರದೇಶದ ಜನಪ್ರಿಯ ಮನರಂಜನಾ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಿಂದ ಕಾನೂನು-ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬುವುದನ್ನು ಅಧಿಕಾರಿಗಳು ಅರಿತುಕೊಳ್ಳಬೇಕಾಗಿದೆ ಎಂದು ಧರಣಿ ನಿರತರು ತಿಳಿಸಿದ್ದಾರೆ. ದೇಶದಲ್ಲಿ ಹಲವು ಕ್ರೀಡೆಗಳು ನಡೆಯುತ್ತಿದ್ದು, ಕೆಲ ಕ್ರೀಡೆಗಳಲ್ಲಿ ಕ್ರೀಡಾಳುಗಳಿಗೆ ಕೆಲವೊಮ್ಮೆ ಸಾಕಷ್ಟು ಘಾಸಿಯಾಗುತ್ತದೆ. ಹಾಗೆಂದು ಸರಕಾರ ಅವುಗಳನ್ನು ನಿಷೇಧಿಸುತ್ತಿಲ್ಲ. ಹೋರಿ ಸ್ಪರ್ಧೆಯೊಂದನ್ನೇ ಏಕೆ ನಿಷೇಧಿಸಬೇಕು? ಎಂದು ಧರಣಿ ನಿರತರು ಪ್ರಶ್ನಿಸಿದ್ದಾರೆ.
ಮನವಿ ಸಲ್ಲಿಕೆ ಸಂದಭರ್ದಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ಚಿದಾನಂದ ಗೌಡ, ಪ್ರಮುಖರಾದ ವೀರೇಂದ್ರಗೌಡ, ದೇವರಾಜ್, ಜಗದೀಶ್, ವೀರದ್ರ ಗೌಡ, ರೈತ ಸಮಾಜದ ಜಿಲ್ಲಾಧ್ಯಕ್ಷ ಸೋಮಶೇಖರಯ್ಯ ಸ್ವಾಮಿ ಮೊದಲಾದವರಿದ್ದರು.





