ನಾಳೆ ಸೆಮಿಫೈನಲ್ ಹಣಾಹಣಿ: ಇಂಗ್ಲೆಂಡ್‌ಗೆ ಬ್ರೆಝಿಲ್ ಸವಾಲು
ಕೋಲ್ಕತಾ, ಅ.24: ದಕ್ಷಿಣ ಅಮೆರಿಕದ ಬಲಿಷ್ಠ ತಂಡ ಬ್ರೆಝಿಲ್ ಬುಧವಾರ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಬ್ರೆಝಿಲ್ 60,000 ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿಯ ವಿರುದ್ಧ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 2-1 ಅಂತರದಿಂದ ಜಯ ಸಾಧಿಸಿತ್ತು. ಜರ್ಮನಿ ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾಧರ್ದಲ್ಲಿ ವೆವೆರ್ಸನ್ ಹಾಗೂ ಪೌಲಿನ್ಹೊ ಅವರ ಆಕರ್ಷಕ ಗೋಲಿನ ನೆರವಿನಿಂದ ಬ್ರೆಝಿಲ್ ಜಯಭೇರಿ ಬಾರಿಸಿತ್ತು.
ಮಳೆಯಿಂದಾಗಿ ಪಿಚ್ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಬ್ರೆಝಿಲ್-ಇಂಗ್ಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಕೊನೆಯ ಕ್ಷಣದಲ್ಲಿ ಗುವಾಹತಿಯಿಂದ ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂಗೆ ಸ್ಥಳಾಂತರಗೊಂಡಿದೆ. ಕೊನೆಯ ಕ್ಷಣದಲ್ಲಿ ಪಂದ್ಯ ಸ್ಥಳಾಂತರಗೊಂಡ ಕಾರಣ ಉಭಯ ತಂಡದ ಆಟಗಾರರು ಸ್ವಲ್ಪ ಸಮಸ್ಯೆ ಎದುರಿಸುವಂತಾಗಿದೆ.
ಇಂಗ್ಲೆಂಡ್ ತಂಡ ಮೂರು ಗ್ರೂಪ್ ಹಂತದ ಪಂದ್ಯಗಳು ಹಾಗೂ ಒಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವನ್ನು ಕೋಲ್ಕತಾದಲ್ಲಿ ಆಡಿದೆ. ಕ್ವಾರ್ಟರ್ ಫೈನಲ್ ಪಂದ್ಯವನ್ನು ಮಾರ್ಗೊವಾದಲ್ಲಿ ಆಡಿತ್ತು.
ಮತ್ತೊಂದೆಡೆ ಬ್ರೆಝಿಲ್ ಆರಂಭದಲ್ಲಿ ಕೊಚ್ಚಿ ಹಾಗೂ ಮಾರ್ಗೊವಾ ಸ್ಟೇಡಿಯಂನಲ್ಲಿ ಆಡಿತ್ತು. ಆದರೆ ಬ್ರೆಝಿಲ್‌ಗೆ ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದಾರೆ. 1977ರಲ್ಲಿ ಪೀಲೆ ಕೋಲ್ಕತಾಕ್ಕೆ ಮೊದಲ ಬಾರಿ ಭೇಟಿ ನೀಡಿದ ಬಳಿಕ ಬ್ರೆಝಿಲ್‌ನ ಬೆಂಬಲಿಗರ ಸಂಖ್ಯೆ ಹೆಚ್ಚಳವಾಗಿದೆ.
ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಶಸ್ತಿ ಫೇವರಿಟ್ ಜರ್ಮನಿಯ ವಿರುದ್ಧ ಗೆಲುವು ಸಾಧಿಸಿದ್ದ ಬ್ರೆಝಿಲ್ ಒಟ್ಟಾರೆ ನಾಲ್ಕನೆ ಹಾಗೂ 2003ರ ಬಳಿಕ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಬ್ರೆಝಿಲ್‌ನ ಮೂವರು ಸ್ಟ್ರೈಕರ್‌ಗಳಾದ ಪೌಲಿನ್ಹೊ, ಲಿಂಕೊಲಿನ್ ಹಾಗೂ ಬ್ರೆನ್ನೆರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬ್ರೆಝಿಲ್ ಟೂರ್ನಿಯಲ್ಲಿ ಈತನಕ ಎದುರಾಳಿ ತಂಡಕ್ಕೆ ಕೇವಲ 2 ಗೋಲು ಬಿಟ್ಟುಕೊಟ್ಟಿದೆ. ಸ್ಪೇನ್ ವಿರುದ್ಧ ವೆಸ್ಲೆ ಸ್ವಯಂ ಗೋಲು ಬಾರಿಸಿದ್ದರೆ, ಜರ್ಮನಿಯ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಮೊದಲಾರ್ಧದಲ್ಲಿ ಮತ್ತೊಂದು ಗೋಲು ಬಿಟ್ಟುಕೊಟ್ಟಿತ್ತು.
ಮತ್ತೊಂದೆಡೆ ಅಮೆರಿಕ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 4-1 ಅಂತರದಿಂದ ಜಯ ಸಾಧಿಸಿರುವ ಇಂಗ್ಲೆಂಡ್ ಭಾರೀ ಆತ್ಮವಿಶ್ವಾಸ ಗಳಿಸಿದೆ. ಇಂಗ್ಲೆಂಡ್ ತಂಡದಲ್ಲಿರುವ ಆಟಗಾರರಿಗೆ ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್‌ಗಳಲ್ಲಿ ಆಡಿರುವ ಅನುಭವವಿದ್ದು, ಯುವ ಆಟಗಾರರು ಪ್ರಸ್ತುತ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇಂಗ್ಲೆಂಡ್‌ನ ಫಾರ್ವರ್ಡ್ ಆಟಗಾರರು ಈವರೆಗೆ ಆಡಿರುವ 5 ಪಂದ್ಯಗಳಲ್ಲಿ ಒಟ್ಟು 15 ಗೋಲುಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ತಂಡ ಗ್ರೂಪ್ ಹಂತದಲ್ಲಿ ಸುಲಭ ಜಯ ಸಾಧಿಸಿತ್ತು. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡದ ವಿರುದ್ಧ ಸವಾಲು ಎದುರಿಸಿತ್ತು.
ಅಮೆರಿಕ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿರುವ ಲಿವರ್‌ಪೂಲ್‌ನ ಯುವ ಆಟಗಾರ ರ್ಹಿಯಾನ್ ಬ್ರೆವ್‌ಸ್ಟರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬ್ರೆವ್‌ಸ್ಟರ್ ಟೂರ್ನಿಯಲ್ಲಿ ಒಟ್ಟು 4 ಗೋಲುಗಳನ್ನು ಬಾರಿಸಿದ್ದಾರೆ.







