ದೇಹದ ಸ್ವಚ್ಛತೆ ಮನಸ್ಸಿನ ಸ್ವಚ್ಛತೆಯ ಪ್ರತಿಬಿಂಬ: ಸಿ.ಟಿ. ರವಿ

ಚಿಕ್ಕಮಗಳೂರು, ಅ.24: ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗುವುದರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಆದರೆ ಧರ್ಮಸ್ಥಳಕ್ಕೆ ಹೋಗಬೇಕಾದ್ರೆ ಸ್ನಾನ ಮಾಡಿ ಶುಚಿಯಾಗಿ ಹೋಗಬೇಕು. ದೇಹದ ಸ್ವಚ್ಛತೆ ಮನಸ್ಸಿನ ಸ್ವಚ್ಛತೆಯ ಪ್ರತಿಬಿಂಬ. ಆದರೆ ಮುಖ್ಯಮಂತ್ರಿಗಳ ಮನಸ್ಸೂ, ದೇಹವೂ ಹಾಗೇ ಇದೆ ಎಂದು ಶಾಸಕ ಸಿ.ಟಿ. ರವಿ ಟೀಕಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರಾಜ್ಯಕ್ಕೆ ಕೂಡುಗೆ ಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದಾರೆ. ಆದರೆ ಒಬ್ಬ ಆಕ್ರಮಣಕಾರಿಗೆ ಮಾನ್ಯತೆ ಸಿಗುತ್ತಿರುವುದು ದುರದೃಷ್ಟಕರ. ನಮಗೆ ಬ್ರಿಟೀಷರು, ಪೋರ್ಚುಗೀಸರು, ಮೊಘಲರು, ಅರಬರು ಆಕ್ರಮಣಕಾರರೇ ಆಗಿದ್ದಾರೆ ಎಂದು ಹೇಳಿದರು.
ಆಕ್ರಮಣಕಾರರನ್ನು ವೈಭವೀಕರಿಸುವುದು ದೇಶದ್ರೋಶದ ಸಂಗತಿ. ಈ ದೇಶದ ಮಣ್ಣಿನ ವಿರುದ್ಧ ಕೆಲವರು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರನ್ನು ಬಿಟ್ಟರೆ ಬಾಬರ್, ಅಕ್ಬರ್ ಜಯಂತಿಯನ್ನು ಮಾಡುತ್ತಾರೆ. ಇವರು ಅಬ್ದುಲ್ ಕಲಾಂ ಜಯಂತಿ ಮಾಡಲಿ, ದಿವಾನ್ ಮಿರ್ಝಾ ಇಸ್ಮಾಯಿಲ್ ಜಯಂತಿ ಮಾಡಲಿ. ಅವರು ನಾಡಿಗಾಗಿ ಒಳ್ಳೆದು ಮಾಡಿದವರಾಗಿದ್ದಾರೆ. ಇದರಲ್ಲಿ ಬಿಜೆಪಿ ಪಾರ್ಟಿ ನಿಲವು ಸ್ವಷ್ಟವಾಗಿದೆ ಎಂದು ನುಡಿದರು.





