ಮಾಲಿ ವಿರುದ್ದ ಗೆಲುವಿನ ಮಾಲೆ ಧರಿಸಲು ಸ್ಪೇನ್ ಲಕ್ಷ್ಯ
ನವಿ ಮುಂಬೈ, ಅ.24: ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಬುಧವಾರ ನಡೆಯಲಿರುವ ಎರಡನೆ ಸೆಮಿ ಫೈನಲ್‌ನಲ್ಲಿ ಸ್ಪೇನ್ ತಂಡ 2015ರ ವಿಶ್ವಕಪ್‌ನ ರನ್ನರ್ಸ್ ಅಪ್ ಮಾಲಿ ತಂಡವನ್ನು ಎದುರಿಸಲಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಇರಾನ್ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಸ್ಪೇನ್ ತಂಡ ಮಾಲಿ ವಿರುದ್ಧ ಗೆಲುವಿನ ಮಾಲೆ ಧರಿಸುವತ್ತ ಚಿತ್ತವಿರಿಸಿದೆ.
ನವಿ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್‌ಗೆ ಆಫ್ರಿಕದ ಅಂಡರ್-17 ನೇಶನ್ಸ್ ಚಾಂಪಿಯನ್ ಮಾಲಿ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗಿದೆ. ಮಾಲಿ ತಂಡದ ಆಟಗಾರರು ದೈಹಿಕವಾಗಿ ಶಕ್ತಿಶಾಲಿಯಾಗಿದ್ದು, ಅತ್ಯಂತ ಚಾಣಾಕ್ಷತನದ ಆಟಕ್ಕೆ ಹೆಸರುವಾಸಿಯಾಗಿದ್ದಾರೆ.
ಸ್ಪೇನ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಬ್ರೆಝಿಲ್ ವಿರುದ್ಧ ಸೋತಿತ್ತು. ಆನಂತರ ನೈಜರ್ ಹಾಗೂ ಕೊರಿಯಾ ವಿರುದ್ಧ ಜಯ ಸಾಧಿಸಿ ಡಿ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದಿತ್ತು. ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತ್ತು.
ಗ್ರೂಪ್ ಹಂತದಲ್ಲಿ ಪರಾಗ್ವೆ ವಿರುದ್ಧ ಸೋತಿರುವ ಮಾಲಿ ಆನಂತರ ನ್ಯೂಝಿಲೆಂಡ್ ಹಾಗೂ ಟರ್ಕಿ ವಿರುದ್ಧ ಜಯ ಸಾಧಿಸಿ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದಿತ್ತು. ಅಂತಿಮ-16ರ ಸುತ್ತಿನಲ್ಲಿ ಇರಾಕ್‌ನ್ನು 5-1 ರಿಂದ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಘಾನಾ ವಿರುದ್ಧ 2-1 ಅಂತರದಿಂದ ಜಯಭೇರಿ ಬಾರಿಸಿತ್ತು.
ಉಭಯ ತಂಡಗಳು ಸ್ಟ್ರೈಕರ್‌ಗಳನ್ನು ಹೆಚ್ಚು ಅವಲಂಬಿಸಿವೆ. ಸ್ಪೇನ್ ತಂಡ ವೆಲೆನ್ಸಿಯಾದ ಯುವ ಆಟಗಾರ ಅಬೆಲ್ ರುಯಿಝ್‌ರನ್ನು ನೆಚ್ಚಿಕೊಂಡಿದೆ. ಈತನಕ 4 ಗೋಲುಗಳನ್ನು ಬಾರಿಸಿರುವ ರುಯಿಝ್ ಟೂರ್ನಿಯ ಅಗ್ರ ಸ್ಕೋರರ್ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.
ಟೂರ್ನಮೆಂಟ್‌ನ ಅಗ್ರ-10 ಗೋಲ್‌ಸ್ಕೋರ್‌ಗಳ ಪೈಕಿ ಮಾಲಿ ತಂಡದ ಮೂವರು ಆಟಗಾರರಿದ್ದಾರೆ. ಲಾಸಾನಾ ಎನ್‌ಡಯಾಯಿ 5 ಗೋಲುಗಳನ್ನು ಬಾರಿಸಿದರೆ, ಜೆವೌಸ್ಸಾ ಟ್ರೊರ್ ಹಾಗೂ ಹಾಡ್ಜಿ ಡ್ರೇಮ್ ತಲಾ 3 ಗೋಲುಗಳನ್ನು ಬಾರಿಸಿದ್ದಾರೆ.
ಮಾಲಿ ತಂಡ ಮೂರು ಗ್ರೂಪ್ ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮುಂಬೈನಲ್ಲಿ ಆಡಿದ್ದು, ಇಲ್ಲಿನ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿದೆ.







