ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 50ನೆ ವರ್ಷದ ವರ್ಧಂತ್ಯುತ್ಸ

ಬೆಳ್ತಂಗಡಿ, ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರ ಪಟ್ಟಾಭಿಷೇಕದ 50ನೆ ವರ್ಷದ ವರ್ಧಂತ್ಯುತ್ಸವವನ್ನು ಶ್ರೀಕ್ಷೇತ್ರದಲ್ಲಿ ಮಂಗಳವಾರ ಆಚರಿಸಲಾಯಿತು.
ಗ್ರಾಮಸ್ಥರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಕಳೆದ ಐದು ದಶಕಗಳಲ್ಲಿ ಹಲವಾರು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಮಾಡಿದ್ದು ಎಲ್ಲವನ್ನೂ ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ. ಕ್ಷೇತ್ರ ವೇಗವಾಗಿ ಬೆಳೆದಿದೆ ನಾನೂ ಅದರೊಂದಿಗೆ ಸಾಗಿದ್ದೇನೆ ಎಂದರು.
ಮುಂದಿನ ವರ್ಷದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಇನ್ನಷ್ಟು ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ ಅವರು ಬೆಂಗಳೂರಿನ ನೆಲಮಂಗಲದಲ್ಲಿ ನೂತನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಆರಂಭಿಸಲಾಗುವುದು, ಉಡುಪಿ ಆಯುರ್ವೇದ ಆಸ್ಪತ್ರೆಯ ವಿಸ್ತರಣೆ ಹಾಗೂ ಮಂಗಳೂರಿನಲ್ಲಿ ನೂತನ ಶಾಲೆಯ ಆರಂಭಿಸುವುದಾಗಿ ಹಗೂ ಆಯುರ್ವೇದ ಹಾಗೂ ಅಲೋಪತಿಯಲ್ಲಿ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.
ಧಾರ್ಮಿಕತೆಯೆಂದರೆ ಅದು ಕೇವಲ ದೇವರ ಕೆಲಸ ಮಾತ್ರವಲ್ಲ ಜನತಾ ಸೇವೆಯೇ ನಿಜವಾದ ಜನಾರ್ಧನ ಸೇವೆಯಾಗಿದೆ ಎಂದು ಭಾವಿಸಿ ಮುಂದುವರಿಸಿ ದ್ದೇನೆ ಅದೆರಡನ್ನೂ ಪ್ರತ್ಯೇಕಿಸಿ ನೋಡಿಲ್ಲ ಎಲ್ಲರ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಅರಸ ಯದುವೀರ್ ಒಡೆಯರ್ ಅವರು ವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಮೈಸೂರು ಅರಮನೆಯ ಸಂಬಂಧ ತುಂಬಾ ಹಳೆಯದು ಅದನ್ನು ಮೂಂದುವರಿಸಿಕೊಂಡು ಹೋಗುತ್ತೇವೆ. ಧರ್ಮಾಧಿಕಾರಿಯವರು ಹಮ್ಮಿಕೊಂಡಿರುವ ಸಮಾಜಸೇವಾ ಚಟುವಟಿಕೆ ಗಳು ಮಾದರಿಯಾಗಿದ್ದು, ಸಮಾಜದಲ್ಲಿ ಬದಲಾವಣೆಗಳನ್ನು ತಂದಿವೆ ಎಂದರು.
ಸಚಿವ ಬಿ ರಮಾನಾಧ ರೈ ಮಾತನಾಡಿ, ಎಲ್ಲ ಜಾತಿ ಧರ್ಮದವರ ಪ್ರೀತಿಗೆ ಪಾತ್ರರಾಗಿರುವ ಕ್ಷೇತ್ರ ಧರ್ಮಸ್ಥಳವಾಗಿದ್ದು ತಮ್ಮ ಸಮಾಜಮುಖಿ ಕಾರ್ಯ ಕ್ರಮಗಳಿಂದಾಗಿ ಡಾ. ಹೆಗ್ಗಡೆಯವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಶಿಕ್ಷಣ ತಜ್ಞ ಗುರುರಾಜ್ ಕರಜಗಿ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಡಿ ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್, ರಾಜೇಂದ್ರ ಕುಮಾರ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರೋ ಎಸ್ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನೂ ಸನ್ಮಾನಿಸಲಾಯಿತು.







