ರಣಜಿ ಟ್ರೋಫಿ: ಕರ್ನಾಟಕ 183 ರನ್‌ಗೆ ಆಲೌಟ್
ಮಿಂಚಿದ ಮುಹಮ್ಮದ್ ಸಿರಾಜ್, ರವಿ ಕಿರಣ್

ಶಿವಮೊಗ್ಗ, ಅ.24: ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಂಭ್ರಮದಲ್ಲಿರುವ ಹೈದರಾಬಾದ್‌ನ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಆತಿಥೇಯ ಕರ್ನಾಟಕ ವಿರುದ್ಧ ಮಂಗಳವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಉಡಾಯಿಸಿ ಗಮನ ಸೆಳೆದಿದ್ದಾರೆ.
ಸಿರಾಜ್(4-42), ಎಡಗೈ ವೇಗಿ ರವಿ ಕಿರಣ್(3-36) ಹಾಗೂ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ(2-31) ಶಿಸ್ತುಬದ್ಧ ದಾಳಿಗೆ ತತ್ತರಿಸಿರುವ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ62.2 ಓವರ್‌ಗಳಲ್ಲಿ 183 ರನ್‌ಗೆ ಆಲೌಟಾಗಿದೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಹೈದರಾಬಾದ್ ತಂಡ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 51 ರನ್ ಗಳಿಸಿದೆ. ದಿನದಾಟದಂತ್ಯಕ್ಕೆ ಬೆನ್ನುಬೆನ್ನಿಗೆ 2 ವಿಕೆಟ್‌ಗಳನ್ನು ಉರುಳಿಸಿದ ಕೆ.ಗೌತಮ್ ಹೈದರಾಬಾದ್‌ಗೆ ಆಘಾತ ನೀಡಿದ್ದಾರೆ.
ಇದಕ್ಕೆ ಮೊದಲು ಟಾಸ್ ಜಯಿಸಿದ ಕರ್ನಾಟಕದ ನಾಯಕ ವಿನಯಕುಮಾರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಾಯಕನ ನಿರ್ಧಾರ ತಪ್ಪೆಂದು ತಿಳಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ.
ಟೆಸ್ಟ್ ಕ್ರಿಕೆಟ್‌ನ ಖಾಯಂ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸಹಿತ ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡ ಕರ್ನಾಟಕ ಆನಂತರ ಚೇತರಿಸಿಕೊಳ್ಳಲೇಇಲ್ಲ. ಕರುಣ್ ನಾಯರ್(23) ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದ ಸ್ಟುವರ್ಟ್ ಬಿನ್ನಿ(88 ಎಸೆತ, 61 ರನ್) ಅವರೊಂದಿಗೆ 4ನೆ ವಿಕೆಟ್‌ಗೆ 44 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ಸಿರಾಜ್‌ಗೆ ಸಮರ್ಥ ಸಾಥ್ ನೀಡಿರುವ ರವಿ ಕಿರಣ್ ಈ ಜೋಡಿಯನ್ನು ಬೇರ್ಪಡಿಸಿದರು. ನಾಯರ್ ಅವರು ಕಿರಣ್‌ಗೆ ವಿಕೆಟ್ ಒಪ್ಪಿಸಿದರು.
ಕಳೆದ ಎರಡು ವರ್ಷ ಕಾಲ ಬಂಗಾಳ ತಂಡದಲ್ಲಿ ಆಡಿದ್ದ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಈ ವರ್ಷ ಹೈದರಾಬಾದ್ ತಂಡದ ಪರ ಆಡಿದ್ದು ಇಂದು 2 ವಿಕೆಟ್‌ಗಳನ್ನು ಕಬಳಿಸಿ ಕರ್ನಾಟಕವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಲು ನೆರವಾದರು.
ಸಂಕ್ಷಿಪ್ತ ಸ್ಕೋರ್
►ಕರ್ನಾಟಕ: 62.2 ಓವರ್‌ಗಳಲ್ಲಿ 183 ರನ್‌ಗೆ ಆಲೌಟ್, (ಸ್ಟುವರ್ಟ್ ಬಿನ್ನಿ 61, ಕರುಣ್ ನಾಯರ್ 23, ಆರ್.ಸಮರ್ಥ್ 19, ಅಭಿಮನ್ಯು ಮಿಥುನ್ 19, ಸಿರಾಜ್ 4-42, ಕಿರಣ್ 3-36, ಓಜಾ 2-31)
►ಹೈದರಾಬಾದ್: 22 ಓವರ್‌ಗಳಲ್ಲಿ 51/3
(ಕೆ. ಸುಮಂತ್ ಅಜೇಯ 34,ಅಕ್ಷಯ್ ರೆಡ್ಡಿ 13, ಕೆ.ಗೌತಮ್ 2-22)







