ಹೃದಯ ಬಡಿತದಲ್ಲಿ ಏರುಪೇರಿಗೆ ಇದೂ ಪ್ರಮುಖ ಕಾರಣವಾಗಿದೆ
ನಮ್ಮ ಶರೀರದ ಸಹಜ ಕಾರ್ಯನಿರ್ವಹಣೆಯಲ್ಲಿ ಹೃದಯ ಬಡಿತ ಸ್ಥಿರವಾಗಿರುವುದು ಬಹು ಮುಖ್ಯವಾಗಿದೆ. ಹೃದಯಬಡಿತದಲ್ಲಿ ಯಾವುದೇ ಏರಿಳಿತಗಳು ಗಂಭೀರ ಹೃದಯ ಸಮಸ್ಯೆಗೆ ಕಾರಣವಾಗುತ್ತವೆ ಮತ್ತು ಇದು ಇತರ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಉಂಟು ಮಾಡಬಹುದು.
ರಕ್ತದಲ್ಲಿ ಥೈರಾಯ್ಡ ಹಾರ್ಮೋನ್ ಹೆಚ್ಚಾದರೆ ಅದು ಹೃದಯ ಬಡಿತದಲ್ಲಿ ಏರುಪೇರುಗಳಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ನೂತನ ಅಧ್ಯಯನ ವೊಂದರಿಂದ ತಿಳಿದುಬಂದಿದೆ. ಹಾಗಾದರೆ ಅಸಹಜ ಹೃದಯ ಬಡಿತಕ್ಕೆ ನಿಖರವಾದ ಕಾರಣಗಳೇನು? ಹೃತ್ಕರ್ಣಗಳೆಂದು ಕರೆಯಲಾಗುವ ಹೃದಯದ ಮೇಲ್ಭಾಗದ ಎರಡು ಕೋಣೆಗಳು ಅಸಹಜವಾಗಿ ಮತ್ತು ಸಾಮಾನ್ಯಕ್ಕಿಂತ ರಭಸವಾಗಿ ಬಡಿದುಕೊಳ್ಳುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಸಂಶೋಧಕರು ಯುರೋಪ್, ಆಸ್ಟ್ರೇಲಿಯಾ ಮತ್ತು ಅಮೆರಿಕಗಳ 11 ಅಧ್ಯಯನಗಳ ದತ್ತಾಂಶಗಳನ್ನು ವಿಶ್ಲೇಷಣೆಗೊಳಪಡಿಸಿದ್ದರು ಮತ್ತು 30,085 ಜನರು ಈ ಅಧ್ಯಯನ ಗಳಿಗೊಳಪಟ್ಟಿದ್ದರು. ಇವರ ಥೈರಾಯ್ಡಿ ನಿರ್ವಹಣೆಯನ್ನು ಅಳೆಯಲಾಗಿತ್ತು ಮತ್ತು ಅಸಹಜ ಹೃದಯ ಬಡಿತದ ಮೇಲೆ ಗಮನವಿರಿಸಲಾಗಿತ್ತು.
ಕನಿಷ್ಠ ಮಟ್ಟದಲ್ಲಿ ಥೈರಾಯ್ಡ ಹಾರ್ಮೋನ್ ಹೊಂದಿದವರಿಗೆ ಹೋಲಿಸಿದರೆ ರಕ್ತದಲ್ಲಿ ಅಧಿಕ ಮಟ್ಟದ ಥೈರಾಯ್ಡ ಹಾರ್ಮೋನ್ ಹೊಂದಿದವರಲ್ಲಿ ಅಸಹಜ ಹೃದಯ ಬಡಿತದ ಅಪಾಯ ಶೇ.45ರಷ್ಟು ಹೆಚ್ಚಿಗೆ ಇದ್ದಿದ್ದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿತ್ತು. ಥೈರಾಯ್ಡಿ ಹಾರ್ಮೋನ್ನ ಮಟ್ಟದಲ್ಲಿ ಅಲ್ಪ ಏರಿಕೆಯಾದರೂ ಅದು ಹೃದಯ ಬಡಿತದಲ್ಲಿ ಏರುಪೇರಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದೂ ತಿಳಿದುಬಂದಿದೆ. ಈ ಅಧ್ಯಯನ ವರದಿಯು ಇತ್ತೀಚಿಗೆ ‘ಸಕ್ಯುಲೇಷನ್’ ಜರ್ನಲ್ನಲ್ಲಿ ಪ್ರಕಟಗೊಂಡಿದೆ.
ರಕ್ತದಲ್ಲಿನ ಥೈರಾಯ್ಡ ಹಾರ್ಮೋನ್ ಮತ್ತು ಫ್ರೀ ಥೈರಾಕ್ಸಿನ್ಗಳ ಅಧಿಕ ಮಟ್ಟವು ಮೇಲ್ಗುಂಡಿಗೆಯ ತಪ್ಪುಬಡಿತದ ಅಪಾಯದ ಹೆಚ್ಚುವರಿ ಕಾರಣವಾಗಿರಬಹುದು ಎನ್ನುವುದನ್ನು ನಮ್ಮ ಅಧ್ಯಯನವು ಸೂಚಿಸುತ್ತಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರಾದ ಕ್ರಿಸ್ಟೀನ್ ಬಾಮ್ಗಾರ್ಟನರ್ ವರದಿಯಲ್ಲಿ ಹೇಳಿದ್ದಾರೆ.
ಅಸಹಜ ಹೃದಯ ಬಡಿತದ ಮುಖ್ಯ ಲಕ್ಷಣಗಳು ಹೀಗಿವೆ:
ಹೃದಯಾತಿಸ್ಪಂದನ
ಸಾಮಾನ್ಯ ಸ್ಥಿತಿಯಲ್ಲಿ ನಮ್ಮ ಹೃದಯವು ದಿನವೊಂದಕ್ಕೆ ಸರಾಸರಿ ಒಂದು ಲಕ್ಷ ಬಾರಿ ಬಡಿದುಕೊಳ್ಳುತ್ತದೆ ಮತ್ತು ಒಟ್ಟು ಸುಮಾರು 2,000 ಗ್ಯಾಲನ್ ರಕ್ತವನ್ನು ಪಂಪ್ ಮಾಡುತ್ತದೆ. ಆದರೆ ಹೃದಯ ಬಡಿತವು ಇದನ್ನು ಮೀರಿದರೆ ಅಥವಾ ಇದಕ್ಕೂ ತುಂಬ ಕಡಿಮೆಯಾದರೆ ಅದು ಮಿದುಳು, ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳಂತಹ ಇತರ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ.
ಡವಗುಟ್ಟುವಿಕೆ
ಹೃದಯ ಬಡಿತವು ಅಸಹಜವಾಗಿದ್ದಾಗ ಅದು ಎದೆ ಮತ್ತು ಕುತ್ತಿಗೆಯಲ್ಲಿ ಒಂದು ಬಗೆಯ ಡವಗುಡುವಿಕೆಗೆ ಕಾರಣವಾಗುತ್ತದೆ. ಇದು ರಕ್ತವನ್ನು ಪಂಪ್ ಮಾಡುವ ಹೃದಯದ ಕಾರ್ಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ತಲೆತಿರುಗುವಿಕೆ
ತಲೆ ತಿರುಗುವಿಕೆಯು ಅಸಹಜ ಹೃದಯ ಬಡಿತದ ಪ್ರಮುಖ ಲಕ್ಷಣವಾಗಿದೆ. ಹೃದಯ ಬಡಿತದಲ್ಲಿ ಏರುಪೇರು ಮಿದುಳಿಗೆ ಆಮ್ಲಜನಕದ ಕೊರತೆಯನ್ನುಂಟು ಮಾಡುತ್ತದೆ ಮತ್ತು ತಲೆ ತಿರುಗುವಿಕೆಗೆ ಕಾರಣವಾಗುತ್ತದೆ.
ಬವಳಿಕೆ
ನಿಯಮಿತವಾಗಿ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಸಾಧ್ಯವಾಗದಿದ್ದಾಗ ಅದು ಶರೀರದ ಸಹಜ ಕಾರ್ಯ ನಿರ್ವಹಣೆಗೆ ತೊಡಕನ್ನುಂಟು ಮಾಡುತ್ತದೆ. ಇದು ಶರೀರದಲ್ಲಿ ನಿಶ್ಶಕ್ತಿಯನ್ನುಂಟು ಮಾಡುತ್ತದೆ ಮತ್ತು ವ್ಯಕ್ತಿಗೆ ಬವಳಿಯುಂಟಾಗಬಹುದು ಅಥವಾ ಮೂರ್ಚೆ ಹೋಗಬಹುದು. ಗಂಭೀರ ಪ್ರಕರಣಗಳಲ್ಲಿ ವ್ಯಕ್ತಿ ಕುಸಿದು ಬಿದ್ದು ದಿಢೀರ್ ಹೃದಯಾಘಾತಕ್ಕೆ ಕಾರಣವಾಗಬಹುದು.
ಉಸಿರಾಟದ ತೊಂದರೆ
ರಕ್ತ ಸಂಚಾರ ಮತ್ತು ಹೃದಯ ಬಡಿತ ಅಸಹಜಗೊಂಡಾಗ ಅದು ಉಸಿರಾಟದ ತೀವ್ರ ತೊಂದರೆ ಮತ್ತು ಉಬ್ಬಸಕ್ಕೆ ಕಾರಣವಾಗುತ್ತದೆ. ವೇಗವಾಗಿ ಹೃದಯ ಬಡಿದು ಕೊಳ್ಳುವುದು ತೀವ್ರ ಎದೆನೋವನ್ನೂ ಉಂಟು ಮಾಡುತ್ತದೆ. ಸಕಾಲದಲ್ಲಿ ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಅದು ಜೀವಮಾನ ಪರ್ಯಂತ ವೈಕಲ್ಯಕ್ಕೆ ಕಾರಣವಾಗಬಹುದು ಮತ್ತು ಮಾರಣಾಂತಿಕವಾಗಬಹುದು.