ಪೊಲೀಸರಿಗೆ ಪ್ರಥಮ ಚಿಕಿತ್ಸಾ ತರಬೇತಿ ಅಗತ್ಯ: ಡಾ.ಸಂಜೀವ ಪಾಟೀಲ್

ಉಡುಪಿ, ಅ.25: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಹಾಗೂ ಇತರ ಅಸಹಜ ಸಾವು ಪ್ರಕರಣಗಳಲ್ಲಿ ಪ್ರಥಮ ಚಿಕಿತ್ಸೆ ದೊರೆಯದೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಸೇರಿದಂತೆ ಕಂದಾಯ, ಅಗ್ನಿಶಾಮಕ, ಅರಣ್ಯ ಇಲಾಖೆಯವರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ಬುಧವಾರ ಆಯೋಜಿಸಲಾದ ಪ್ರಥಮ ಚಿಕಿತ್ಸಾ ತರಬೇತುದಾರರ ತರಬೇತಿ ಶಿಬಿರವನ್ನು ಉ್ಘಾಟಿಸಿ ಅವರು ಮಾತ ನಾಡುತಿದ್ದರು.
ಗಾಯಾಳುಗಳಿಗೆ ಸರಿಯಾದ ಸಮಯಕ್ಕೆ ಪ್ರಥಮ ಚಿಕಿತ್ಸೆ ನೀಡಿದರೆ ಅವರ ಜೀವ ಉಳಿಸಬಹುದಾಗಿದೆ. ಆದುದರಿಂದ ಪ್ರಥಮ ಚಿಕಿತ್ಸೆಯ ಮಹತ್ವದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು. ಶಾಲಾ ಪಠ್ಯದಲ್ಲಿ ಇದನ್ನು ಅಳವಡಿಸಿದರೆ ಮಕ್ಕಳಿಗೆ ಅದರ ಮಹತ್ವ ಅರಿವಾಗುತ್ತದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಆತ್ಮಹತ್ಯೆ ಹೊರತುಪಡಿಸಿದ ಅಸಹಜ ಸಾವು ಪ್ರಕರಣಗಳಲ್ಲಿ ಸಾಯುವವರ ಸಂಖ್ಯೆ ಅಧಿಕವಾಗಿದೆ. ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗೆ ಹಾಗೂ ಕಂದಾಯ, ಅಗ್ನಿಶಾಮಕ, ಅರಣ್ಯ ಇಲಾಖೆಯವರಿಗೂ ತರಬೇತಿ ನೀಡಿ. ಇಂತಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಘಟಕದ ಸಭಾಪತಿ ಡಾ.ಉಮೇಶ್ ಪ್ರಭು ವಹಿಸಿದ್ದರು. ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಜನಾದರ್ನ್ ಸ್ವಾಗತಿಸಿದರು. ಉಪಸಭಾಪತಿ ಡಾ.ಅಶೋಕ್ ಕುಮಾರ್ ವಂದಿಸಿದರು. ಜಯರಾಮ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.







