ಮಾತೃಪೂರ್ಣ ಯೋಜನೆ ಕೈಬಿಡಲು ಉಡುಪಿ ತಾಪಂ ನಿರ್ಣಯ

ಉಡುಪಿ, ಅ.25: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಯುಕ್ತ ಬಿಸಿಯೂಟ ಒದಗಿಸುವ ರಾಜ್ಯ ಸರಕಾರದ ಮಾತೃಪೂರ್ಣ ಯೋಜನೆಯನ್ನು ಕೈಬಿಟ್ಟು, ಈ ಹಿಂದಿನಂತೆ ಪೌಷ್ಠಿಕ ಆಹಾರ ವನ್ನು ಅವರ ಮನೆಗಳಿಗೆ ನೀಡುವ ವ್ಯವಸ್ಥೆಯನ್ನು ಮುಂದುರಿಸಬೇಕೆಂಬ ನಿರ್ಣಯವನ್ನು ಇಂದು ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಕೈ ಬಿಡಬೇಕೆಂಬ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ಮನವಿಯನ್ನು ಪ್ರಸ್ತಾಪಿಸಿದರು.
ಈ ವೇಳೆ ಮಾತನಾಡಿದ ಸದಸ್ಯ ಸುಧೀರ್ ಶೆಟ್ಟಿ, ಈ ಯೋಜನೆಯಿಂದ ಗರ್ಭಿಣಿ, ಬಾಣಂತಿಯರು ಮಾತ್ರವಲ್ಲದೆ ಅಂಗನವಾಡಿ ಕಾರ್ಯಕರ್ತೆಯ ರಿಗೂ ತೊಂದರೆಯಾಗುತ್ತಿದೆ. ಕಿ.ಮೀ.ಗಟ್ಟಲೆ ದೂರ ಇರುವ ಅಂಗನವಾಡಿ ಕೇಂದ್ರಕ್ಕೆ ಮಧ್ಯಾಹ್ನ ಸುಡುಬಿಸಿಲಿನಲ್ಲಿ ಬಾಣಂತಿಯರು ಹಾಗೂ ಗರ್ಭಿಣಿ ಯರು ನಡೆದುಕೊಂಡು ಹೋಗುವುದು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಆದುದರಿಂದ ಈ ಯೋಜನೆಯನ್ನು ಕೈಬಿಟ್ಟು ಮನೆಗೆ ಪೌಷ್ಠಿಕ ಆಹಾರವನ್ನು ಕೊಡಲಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯೆ ಡಾ.ಸುನೀತಾ ಶೆಟ್ಟಿ, ನರೇಗಾ ಯೋಜನೆ ಜಾರಿ ಯಾದಾಗಲೂ ಇದೇ ರೀತಿಯ ಸಮಸ್ಯೆಗಳಿದ್ದವು. ಮುಂದೆ ಎಲ್ಲವನ್ನು ಸರಕಾರ ಸರಿ ಮಾಡಲಿದೆ ಎಂದು ತಿಳಿಸಿದರು. ಚರ್ಚೆಯ ಬಳಿಕ ಗರ್ಭಿಣಿ, ಬಾಣಂತಿ ಯರಿಗೆ ತೊಂದರೆಯಾಗುವ ಈ ಯೋಜನೆಯನ್ನು ಕೈಬಿಟ್ಟು ಈ ಹಿಂದಿನ ವ್ಯವಸ್ಥೆಯನ್ನೇ ಸರಕಾರ ಮುಂದುವರಿಸಬೇಕೆಂಬ ನಿರ್ಣಯವನ್ನು ಸಭೆಯಲ್ಲಿ ಮಾಡಲಾಯಿತು.
ಉತ್ತರಿಸಿದ ಅಧಿಕಾರಿಗೆ ತರಾಟೆ: ಡಾ.ಸುನೀತಾ ಶೆಟ್ಟಿ ಅವರು ಅರಣ್ಯ ಇಲಾಖೆಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಕಳೆದ ನಾಲ್ಕು ತಿಂಗಳುಗಳಿಂದ ಉತ್ತರಿ ಸಿದ ಅಧಿಕಾರಿಯನ್ನು ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ರಸ್ತೆಗೆ ಸಂಬಂಧಿಸಿದ ಪ್ರಶ್ನೆ ಕೇಳಿ ನಾಲ್ಕು ತಿಂಗಳಾಯಿತು. ಇನ್ನು ಉತ್ತರ ಬಂದಿಲ್ಲ. ವಲಯ ಅರಣ್ಯಾಧಿಕಾರಿ ಇಂದಿನ ಸಭೆಗೂ ಹಾಜರಾಗಿಲ್ಲ. ಅರಣ್ಯ ದಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲು ಇವರಿಗೆ ಆಗಲ್ಲ. ಸಣ್ಣ ರಸ್ತೆ ನಿರ್ಮಿಸಿದಕ್ಕೆ ತೊಂದರೆ ಮಾಡುತ್ತಿದ್ದಾರೆಂದು ಡಾ.ಸುನೀತಾ ಶೆಟ್ಟಿ ಆರೋಪಿಸಿ ದರು. ಈ ವೇಳೆ ಹಾಜರಿದ್ದ ಅರಣ್ಯ ಇಲಾಖೆಯ ಅಧಿಕಾರಿಯನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಕೇಳುವ ಯಾವುದೇ ಪ್ರಶ್ನೆಗೆ ಉತ್ತರ ಸಿಗಲ್ಲ. ಕಾಟಾಚಾರಕ್ಕೆ ತಾಪಂ ಸಾಮಾನ್ಯ ಸಭೆ ನಡೆಸಲಾಗುತ್ತಿದೆ. ಇಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಗರಂ ಆದ ಅಧ್ಯಕ್ಷರು, ಅಧಿಕಾರಿಗಳಿಗೆ ಉತ್ತರ ಕೊಡಲು ಸಾಧ್ಯವಾಗದಿದ್ದರೆ ಸಭೆಗೆ ಹಾಜರಾಗುವುದು ಬೇಡ ಎಂದು ಎಚ್ಚರಿಕೆ ನೀಡಿದರು. ಒಂದು ವಾರದಲ್ಲಿ ಉತ್ತರ ಸಿಗದಿದ್ದರೆ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಬರೆಯಲಾಗುವುದು ಎಂದು ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್ ಎಚ್ಚರಿಕೆ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಿಗೆ 14ನೆ ಹಣಕಾಸು ಯೋಜನೆಯಿಂದ ಬಿಡುಗಡೆಯಾಗಿರುವ ಒಟ್ಟು ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಸುಧೀರ್ ಶೆಟ್ಟಿ ಕೇಳಿದರು. 2015-16ನೆ ಸಾಲಿನಲ್ಲಿ 3.97ಕೋಟಿ ರೂ., 16-17ನೆ ಸಾಲಿನಲ್ಲಿ 14.60ಕೋಟಿ ರೂ., 17-18ರಲ್ಲಿ 17.6 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಇಓ ಮೋಹನ್‌ರಾಜ್ ಸಭೆಗೆ ತಿಳಿಸಿದರು.
ರೇಶನ್ ಕಾರ್ಡ್‌ನಲ್ಲಿ ಗೊಂದಲ: ಪಡಿತರ ಚೀಟಿಯಲ್ಲಿನ ಹೆಸರಿನ ಅವಾಂತರದ ಕುರಿತು ವಿಷಯ ಪ್ರಸ್ತಾಪಿಸಿದ ಸುಧೀರ್ ಕುಮಾರ್ ಶೆಟ್ಟಿ, ಪಡಿತರ ಚೀಟಿಯಲ್ಲಿ ಮನೆಯ ಯಜಮಾನನ ಹೆಸರೇ ಬದಲಾಗಿರುವುದ ರಿಂದ ಅದನ್ನು ಸರಿಪಡಿಸುವುದು ಹೇಗೆ ಎಂಬ ಪ್ರಶ್ನೆಯನ್ನು ತಹಶೀಲ್ದಾರ್‌ಗೆ ಕೇಳಿದರು. ಯಜಮಾನನ ಹೆಸರು ಬದಲಾವಣೆ ಮಾಡಲು ಸಾಫ್ಟ್‌ವೇರ್‌ನಲ್ಲಿ ಅವಕಾಶ ಇಲ್ಲ. ಈ ಬಗ್ಗೆ ಸರಕಾರ ಪತ್ರ ಬರೆಯಲಾಗಿದೆ ಎಂದು ತಹಶೀ ಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದರು.
ಮುದರಂಗಡಿ ಶಾಲಾ ಮೈದಾನದ ಕಾಮಗಾರಿ ಪರಿಶೀಲನೆಗೆ ಸಂಬಂಧಿಸಿ ನನ್ನ ಮೇಲೆ ಪ್ರಕರಣ ದಾಖಲಾಗಿದೆ ಎಂಬ ಸದಸ್ಯ ಮೈಕಲ್ ಡಿಸೋಜ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ, ಈ ಬಗ್ಗೆ ಪಿಡಿಓಗೆ ನೋಟೀಸ್ ನೀಡಿ ವಿವರಣೆ ಕೇಳಲಾಗಿದೆ. ನಿಮ್ಮ ಮೇಲೆ ಯಾವುದೇ ದೂರು ದಾಖಲಾಗಿಲ್ಲ ಎಂದರು. ಈ ಮಧ್ಯೆ ಮೈಕಲ್ ಡಿಸೋಜ ಅಧ್ಯಕ್ಷರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ ನಡೆದವು. ನ.8ರಂದು ಈ ವಿಚಾರಕ್ಕೆ ಸಂಬಂಧಿಸಿ ಮುದರಂಗಡಿ ಗ್ರಾಪಂ ಅಧ್ಯಕ್ಷರು, ಪಿಡಿಓ ಹಾಗೂ ತಾಪಂ ಸದಸ್ಯರನ್ನು ಕಚೇರಿಗೆ ಕರೆಸಿ ಮಾತುಕತೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಬೆಳಪು ಗ್ರಾಪಂ ಅಧ್ಯಕ್ಷ, ತಾಪಂ ನಾಮನಿರ್ದೇಶಿತ ಸದಸ್ಯ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆಸಿದ್ದ ಅರಣ್ಯವನ್ನು ಕಟಾವು ಮಾಡಿರುವ ಅರಣ್ಯ ಇಲಾಖೆಯು ಅದನ್ನು 50:50 ಅನುಪಾತದಂತೆ ಹಂಚಿಕೆ ಮಾಡದೆ ಪಂಚಾಯತ್‌ರಾಜ್ ವ್ಯವಸ್ಥೆಗೆ ಕೊಡಲಿ ಏಟು ನೀಡಿದೆ ಎಂದು ಆರೋಪಿಸಿದರು. ಏಕಾಏಕಿ ತಡೆ ಮಾಡಿರುವ ಗ್ರಾಮೀಣ ಪ್ರದೇಶದ ನರ್ಮ್ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಉಪಸ್ಥಿತರಿದ್ದರು.







